ಕುಶಾಲನಗರ, ಜು. 27: ಪ್ರತಿ ಗ್ರಾಮಮಟ್ಟದಲ್ಲಿ ಆರೋಗ್ಯ ಅಭಯಹಸ್ತ ಕಾರ್ಯಕ್ರಮ ಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು ತಿಳಿಸಿದರು.
ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಈ ಕಾರ್ಯಕ್ರಮ ರೂಪಿಸಲಾಗಿದ್ದು ಗ್ರಾಮಕ್ಕೊಬ್ಬರಂತೆ ಕಾಂಗ್ರೆಸ್‍ನ ಪ್ರತಿನಿಧಿ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರತಿನಿಧಿಗಳಿಗೆ ಅಗತ್ಯ ತರಬೇತಿ ನೀಡುವ ಮೂಲಕ ಪಿಪಿಇ ಕಿಟ್, ಫೇಸ್‍ಶೀಲ್ಡ್ ಗ್ಲೌಸ್, ಪಲ್ಸ್ ಮೀಟರ್, ಥರ್ಮಲ್ ಸ್ಕ್ಯಾನರ್ ಮತ್ತಿತರ ಅಗತ್ಯ ಸಲಕರಣೆ ಪಕ್ಷದ ಮೂಲಕ ಒದಗಿಸಲಾಗಿದೆ.
ಪ್ರತಿ ಗ್ರಾಮಮಟ್ಟದಲ್ಲಿ ಕಾಂಗ್ರೆಸ್ ಪ್ರತಿನಿಧಿ ಜನತೆಯ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಶುಶ್ರೂಷೆ ಬೇಕಿದ್ದಲ್ಲಿ ಆಯಾ ಪ್ರದೇಶದ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.
ಪ್ರಸಕ್ತ ಕೊರೊನಾ ಹೆಸರಲ್ಲಿ ಬಿಜೆಪಿ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಬದಲು ಗೊಂದಲ ಸೃಷ್ಟಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕಂಗಾಲಾಗಿರುವ ರಾಜ್ಯದ ಜನತೆಯಲ್ಲಿ ಕಾಂಗ್ರೆಸ್ ಅಭಯಹಸ್ತ ಯೋಜನೆ ಮೂಲಕ ಭರವಸೆ ಮೂಡಿಸುವುದು ಕಾರ್ಯ ಕ್ರಮದ ಮುಖ್ಯ ಉದ್ದೇಶ ಎಂದು ಮಾಹಿತಿ ನೀಡಿದರು. ಕಾಂಗ್ರೆಸ್‍ನ ಆರೋಗ್ಯ ಪ್ರತಿನಿಧಿಗಳಿಗೆ 2 ಲಕ್ಷ ರೂ.ಗಳ ವಿಮೆ ಒದಗಿಸುವ ಮೂಲಕ ಅವರ ಆರೋಗ್ಯದ ಬಗ್ಗೆ ಕೂಡ ಪಕ್ಷ ಕಾಳಜಿ ವಹಿಸಿದೆ ಎಂದು ತಿಳಿಸಿದರು. ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ಈಗಾಗಲೇ ಕೊಡಗಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಪ್ರತಿನಿಧಿಯಾಗಿ ಜವಾಬ್ದಾರಿ ವಹಿಸಿಕೊಳ್ಳುವವರ ಬಗ್ಗೆ ಮಾಹಿತಿ ರವಾನಿಸಲಾಗುವುದು. ಆ ಬಳಿಕ ವೈದ್ಯರ ತಂಡ ಆಯಾ ಪ್ರತಿನಿಧಿಗೆ ಅಗತ್ಯ ತರಬೇತಿ ನೀಡಲಿದೆÉ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಟಿ.ಇ. ಸುರೇಶ್, ಎಸ್‍ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರು, ಕಾರ್ಯಕರ್ತ ವಸಂತ್ ಇದ್ದರು.