ವೀರಾಜಪೇಟೆ, ಜು. 19: ಕಳೆದ ನಾಲ್ಕು ದಿನಗಳ ಹಿಂದೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ನಾಲ್ಕು ಮಂದಿ ಬೆಂಗಳೂರಿನಿಂದ ವೀರಾಜಪೇಟೆಗೆ ಬಂದಿದ್ದು ಇವರ ಆರೋಗ್ಯ ತಪಾಸಣೆ ನಡೆಸಿದಾಗ ನಾಲ್ವರಿಗೂ ಪಾಸಿಟಿವ್ ವರದಿ ಬಂದುದರಿಂದ ಇವರುಗಳು ವಾಸವಿದ್ದ ಮನೆಯ ಆಜುಬಾಜುದಾರರಿಗೆ ಕೊರೊನಾ ವೈರಸ್ ಹರಡದಂತೆ ಅಪ್ಪಯ್ಯಸ್ವಾಮಿ ಮುಖ್ಯರಸ್ತೆಯ 100 ಮೀಟರ್ ಅಂತರದವರೆಗೆ ಲಾಕ್‍ಡೌನ್ ಮಾಡಿ ಬ್ಯಾರಿಕೇಡ್‍ನಿಂದ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದ ವೀರಾಜಪೇಟೆಯಲ್ಲಿ 5ನೇ ಬಾರಿಗೆ ಲಾಕ್‍ಡೌನ್ ಮಾಡಿದಂತಾಗಿದೆ.

ಬೆಂಗಳೂರಿನಿಂದ ವೀರಾಜಪೇಟೆಗೆ ಬಂದು ಮನೆಯಲ್ಲಿದ್ದ 65 ವರ್ಷದ ಪುರುಷ, 60 ವರ್ಷದ ಮಹಿಳೆ ಇಬ್ಬರನ್ನು ಚಿಕಿತ್ಸೆಗಾಗಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದ್ದರೆ, 35 ವರ್ಷ ಹಾಗೂ 14 ವರ್ಷದ ಇಬ್ಬರನ್ನು ಅಪ್ಪಯ್ಯ ಸ್ವಾಮಿ ರಸ್ತೆಯ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ವೀರಾಜಪೇಟೆ ತಾಲೂಕು ಆಡಳಿತದ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ತಂಡ ಸೀಲ್‍ಡೌನ್ ಸಂಪರ್ಕ ತಡೆಯಲ್ಲಿ ಭಾಗವಹಿಸಿದ್ದರು.