ಮಡಿಕೇರಿ, ಮೇ 24: ರಂಜಾನ್ ಹಬ್ಬದ ನಡುವೆ ಕೊಡಗು ಜಿಲ್ಲೆಯಲ್ಲಿ ಹೆಚ್ಚುವರಿ ಭದ್ರತೆಯ ಸಲುವಾಗಿ ಹಾಸನದಿಂದ ಇಲ್ಲಿಗೆ ಆಗಮಿಸಿರುವ, 20 ಮಂದಿ ಕೆಎಸ್‍ಆರ್‍ಪಿ ಸಿಬ್ಬಂದಿಗಳನ್ನು ಕೊರೊನಾ ಸೋಂಕಿನ ಆತಂಕದೊಂದಿಗೆ ಇಂದು ಸಾಂಸ್ಥಿಕ ಗೃಹ ಸಂಪರ್ಕ ತಡೆಗೆ ಒಳಪಡಿಸಲಾಗಿದೆ.ಕಾರಣ ಕೆಲವು ದಿನಗಳ ಹಿಂದೆ ಹಾಸನದಿಂದ ಕೆಎಸ್‍ಆರ್‍ಪಿ ತುಕಡಿಯನ್ನು ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಭದ್ರತಾ ವ್ಯವಸ್ಥೆಗಾಗಿ ಕಳುಹಿಸಿಕೊಡಲಾಗಿದೆ. ಈ ತಂಡದಲ್ಲಿ ಕರ್ತವ್ಯನಿರತ ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಈ ನಡುವೆ ಬೆಂಗಳೂರಿನಿಂದ ಹಾಸನಕ್ಕೆ ಹಿಂತಿರುಗಿರುವ ತಂಡದಲ್ಲಿದ್ದ, ನಾಲ್ವರು ಸಿಬ್ಬಂದಿಗಳ ಸಹಿತ ಇತರರ 20 ಮಂದಿಯ ತಂಡ ಇಂದು ಮಡಿಕೇರಿಯಲ್ಲಿ ಭದ್ರತಾ ವ್ಯವಸ್ಥೆಗಾಗಿ ಆಗಮಿಸಿದೆ. ಅಷ್ಟರೊಳಗೆ ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ತೆರಳಿದ ಓರ್ವ ಸಿಬ್ಬಂದಿಯ ಆರೋಗ್ಯ ತಪಾಸಣಾ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಹೀಗಾಗಿ ಇದೀಗ ಜಿಲ್ಲೆಗೆ ಆಗಮಿಸಿರುವ ತಂಡದಲ್ಲಿ ಆ ಸಿಬ್ಬಂದಿಯ ಸಂಪರ್ಕ ಹೊಂದಿದ್ದ ನಾಲ್ವರು ಇರುವ ಮೇರೆಗೆ, ಇಂದು ಇಲ್ಲಿ ಕರ್ತವ್ಯಕ್ಕೆ ಆಗಮಿಸಿರುವ ಹಾಸನದ ಎಲ್ಲಾ 20 ಮಂದಿಯನ್ನು ಹೋಂ ಕ್ವಾರೆಂಟೈನ್‍ಗೆ ಸೇರಿಸಲಾಗಿದೆ. ಈ ಇಪ್ಪತ್ತು ಮಂದಿಯ ಗಂಟಲು ದ್ರವವನ್ನು ಇನ್ನಷ್ಟೇ ಪರೀಕ್ಷೆಗೆ ಒಳಪಡಿಸಿ, ಮುಂದಿನ ಕ್ರಮಕ್ಕಾಗಿ ಮೈಸೂರಿಗೆ ಕಳುಹಿಸಿಕೊಡಲಾಗುವದು. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಕೊರೊನಾ ಸೋಂಕಿನ ಬಗ್ಗೆ ಖಾತರಿಯಾಗಬೇಕಿದೆ ಎಂದು ಮೂಲಗಳು ಖಚಿತಪಡಿಸಿವೆ.