ಸೋಮವಾರಪೇಟೆ, ಮಾ. 27: ಕೊರೊನಾ ಮಹಾಮಾರಿಯ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವದರಿಂದ ಅಲೆಮಾರಿ ಕೂಲಿ ಕಾರ್ಮಿಕ ವರ್ಗ ಅತಂತ್ರ ಸ್ಥಿತಿಗೆ ತಲುಪಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿಯೇ ನೂರಾರು ಸಂಖ್ಯೆಯಲ್ಲಿ ಅಲೆಮಾರಿ ಕಾರ್ಮಿಕರಿದ್ದು, ಲಾಕ್‍ಡೌನ್ ಆದೇಶದಿಂದಾಗಿ ಅವರುಗಳ ಬದುಕು ಜೋಪಡಿಯಿಂದ ಬೀದಿಗೆ ಬಿದ್ದಂತಾಗಿದೆ.

ರಸ್ತೆ, ಚರಂಡಿ, ಕೆರೆ ಸೇರಿದಂತೆ ಇನ್ನಿತರ ಮಣ್ಣು ಕೆಲಸ ನಿರ್ವಹಿಸುವ ಕಾರ್ಮಿಕರು ಹೊರ ಜಿಲ್ಲೆ, ಹೊರ ರಾಜ್ಯದಿಂದ ಸೋಮವಾರಪೇಟೆಗೆ ತಿಂಗಳುಗಳ ಹಿಂದೆಯೇ ಆಗಮಿಸಿದ್ದಾರೆ. ಅಲ್ಲಲ್ಲಿ ಡೇರೆಗಳನ್ನು ನಿರ್ಮಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದ ಇಂತಹ ಕುಟುಂಬಗಳು ಇದೀಗ ಅಕ್ಷರಶಃ ಬೀದಿಗೆ ಬಿದ್ದಿವೆ.

ಲಾಕ್‍ಡೌನ್ ಆದೇಶದ ಬಗ್ಗೆ ಯಾವದೇ ಮಾಹಿತಿ ಇಲ್ಲದ ಇಂತಹ ಕೂಲಿ ಕಾರ್ಮಿಕರನ್ನು ಇದೀಗ ಮಾಲೀಕರುಗಳು ತಮ್ಮ ಊರಿಗೆ ಹೋಗುವಂತೆ ಸೂಚನೆ ನೀಡಿದ್ದು, ಇದರಿಂದಾಗಿ ಇಂತಹ ಮಂದಿ ದಿಕ್ಕುತೋಚದೇ ಇಲ್ಲಿನ ತಾಲೂಕು ಕಚೇರಿ ಅಧಿಕಾರಿಗಳಿಗೆ ಕೈಮುಗಿಯುತ್ತಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯೇ ಸೋಮವಾರಪೇಟೆಗೆ ಆಗಮಿಸಿದ್ದ ಆಂದ್ರಪ್ರದೇಶ, ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನ ಮೂರು ಕುಟುಂಬಗಳು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಂದಳ್ಳಿ ಸುತ್ತಮುತ್ತ ಕೆರೆ, ರಸ್ತೆ ಚರಂಡಿ ಸೇರಿದಂತೆ ಮಣ್ಣು ಕೆಲಸದಲ್ಲಿ ತೊಡಗಿಕೊಂಡಿದ್ದು, ಇದೀಗ ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸವೂ ಇಲ್ಲದೇ, ಇರಲು ಜೋಪಡಿಯೂ ಇಲ್ಲದೇ ಅತಂತ್ರವಾಗಿದೆ.

ಶುಕ್ರವಾರ ಬೆಳಿಗ್ಗೆ ಕುಂದಳ್ಳಿಯಿಂದ 14 ಕಿ.ಮೀ. ದೂರವಿರುವ ಸೋಮವಾರಪೇಟೆಗೆ ಕಾಲ್ನಡಿಗೆಯಲ್ಲಿ ಬಂದ 8 ಮಂದಿಯ ತಂಡ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕಣ್ಣೀರಿಡುತ್ತಾ ಊರಿನ ದಾರಿ ತೋರಿಸಿ ಎಂದು ಮನವಿ ಮಾಡುತ್ತಿತ್ತು.

ಇದನ್ನು ಗಮಿಸಿದ ಪ.ಪಂ. ಸದಸ್ಯ ಬಿ.ಆರ್. ಮಹೇಶ್ ಅವರು, ನಿರ್ಗತಿಕರಿಗೆ ಬಾಳೆಹಣ್ಣು, ಬಿಸ್ಕೆಟ್, ಬ್ರೆಡ್‍ಗಳನ್ನು ನೀಡಿ, ಊರಿಗೆ ಕಳುಹಿಸುವ ವ್ಯವಸ್ಥೆಗಾಗಿ ತಹಶೀಲ್ದಾರ್, ಠಾಣಾಧಿಕಾರಿ, ಜಿಲ್ಲಾ ಪೊಲೀಸರು, ಡಿವೈಎಸ್‍ಪಿ ಕಚೇರಿಯನ್ನು ಸಂಪರ್ಕಿಸಿದರೂ ಯಾವದೇ ಪ್ರಯೋಜನವಾಗಲಿಲ್ಲ. ಆನಂತರ ತಾಲೂಕು ಆಡಳಿತದಿಂದ ಒಂದಿಷ್ಟು ಪಡಿತರದ ವ್ಯವಸ್ಥೆ ಮಾಡಿಕೊಟ್ಟು ವಾಹನದ ಮೂಲಕ ಕುಂದಳ್ಳಿಗೆ ಕಳುಹಿಸಲಾಯಿತು.

ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ 8 ವರ್ಷದ ಬಾಲಕ, 10 ವರ್ಷದ ಬಾಲಕಿಯನ್ನು ಒಳಗೊಂಡ ಈ ತಂಡ ಸ್ವಗ್ರಾಮ ತಲುಪಲು ಸಾಧ್ಯವಾಗದೇ ಹಿಂದಿರುಗಿ ಕುಂದಳ್ಳಿ ಸೇರಿತು. ತಹಶೀಲ್ದಾರ್ ಕಚೇರಿ ಎದುರು ಕಣ್ಣೀರಿಟ್ಟರೂ ಸಹ ಸರ್ಕಾರದ ಆದೇಶದಿಂದಾಗಿ ಇವರುಗಳನ್ನು ವಾಪಸ್ ಊರಿಗೆ ಕಳುಹಿಸಲು ಅಸಾಧ್ಯವಾಯಿತು.

ಕೊಡಗಿನಿಂದ ಕಳುಹಿಸಿದರೂ ಇತರ ಜಿಲ್ಲೆಗಳ ಬಾರ್ಡರ್‍ನಲ್ಲಿ ಅಡ್ಡಗಟ್ಟುತ್ತಾರೆ. ಕೆಲ ದಿನಗಳ ಕಾಲ ತಾವಿದ್ದ ಸ್ಥಳದಲ್ಲಿಯೇ ಇದ್ದು, ಪರಿಸ್ಥಿತಿ ತಿಳಿಯಾದ ನಂತರ ಊರಿಗೆ ಹೊರಡಿ ಎಂದು ಅಧಿಕಾರಿಗಳು ಸಲಹೆ ನೀಡಿದರು. ಇಂತಹ ನೂರಾರು ಮಂದಿ ಸೋಮವಾರಪೇಟೆಯಾದ್ಯಂತ ಬೀಡುಬಿಟ್ಟಿದ್ದು, ವಾಪಸ್ ಊರಿಗೆ ಹೋಗಲಾಗದೇ, ಇಲ್ಲೂ ಕೆಲಸ ಮಾಡಲಾಗದೇ ಅತಂತ್ರರಾಗಿದ್ದಾರೆ. ಇವರುಗಳ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬದನ್ನು ಕಾದುನೋಡಬೇಕಿದೆ.

-ವಿಜಯ್ ಹಾನಗಲ್