ನರಿ-ನಾಯಿಗಳಂತೆ ನರಳುತ್ತಿರುವ, ಹೊರಳಾಡುತ್ತಿರುವ, ಅಸುನೀಗುತ್ತಿ ರುವ ಕೊರೊನಾ ಪೀಡಿತರ ದೃಶ್ಯಗಳನ್ನು ನಿತ್ಯ ಸಾಮಾಜಿಕ ತಾಣಗಳಲ್ಲಿ ನೋಡುತ್ತಿದ್ದೇವೆ. ಅವು ವಿದೇಶದ ಚಿತ್ರಣಗಳು.
ಇದೀಗ ಭಾರತದಲ್ಲೂ ಸಾಂಕ್ರಾಮಿಕ ಹರಡುತ್ತಿದೆ. ಅದನ್ನು ಎದುರಿಸಲು ದೇಶ ಖಂಡಿತ ತಯಾರಿಲ್ಲ. ಇರುವ ಒಂದೇ ದಾರಿ ಎಂದರೆ ಮನೆಗಳೊಳಗೆ ಕುಳಿತು ರೋಗ ಹರಡುವದನ್ನು ತಪ್ಪಿಸುವದು. ದುರ್ದೈವ ಅಂದರೆ ಅಕ್ಷರಸ್ಥರು, ಅನಕ್ಷರಸ್ಥರು, ಆಳುವವರು ಎಲ್ಲರೂ ತಿಳಿಗೇಡಿಗಳಂತೆ ವರ್ತಿಸುತ್ತಿರುವದು. 21 ದಿನ ಸಂಪೂರ್ಣ ಬಂದ್ ಎಂದು ಪ್ರಧಾನಿ ಘೋಷಿಸಿದಾಗ ಸಂತಸ ಪಟ್ಟವರೇ ಹೆಚ್ಚು. ಆದರೆ, ಪರಿಣಾಮವನ್ನು ಲಘುವಾಗಿ ಗ್ರಹಿಸಿರುವ ಹೆಚ್ಚಿನ ನಾಯಕರುಗಳು ದಿನಕ್ಕೊಂದು ತೀರ್ಮಾನ ನೀಡಿ, ಜನತೆ ರಸ್ತೆಗಳಲ್ಲಿ ಹಾಯಾಗಿ ಅಡ್ಡಾಡುವಂತೆ ಮಾಡಿದ್ದಾರೆ. ವಿಷಯದ ಗಾಂಭೀರ್ಯ ಕರಗುವಂತೆ ಮಾಡಿದ್ದಾರೆ. ಸರಕಾರ, ನಾಯಕರುಗಳು ಏನಾದರೂ ಹೇಳಿಕೊಳ್ಳಲಿ, ಜನತೆ ವಿವೇಚನೆ ಬಳಸಿ, ಜೀವ, ಕುಟುಂಬ ಉಳಿಯಬೇಕಾದರೆ ಖಡ್ಡಾಯವಾಗಿ ಮನೆಯೊಳಗೇ ಇರಿ. ಪ್ರಪಂಚ ಓಡಿ ಹೋಗದು, ನಾಲ್ಕಾರು ದಿನ ಸರಳ ಆಹಾರ ಸೇವಿಸಿದರೆ ದೇಹ ಸೊರಗದು.
ಈ ಸಂದರ್ಭ ಸಮಾಜದ ನಡೆಯನ್ನು ದೂರದೃಷ್ಟಿಯಿಂದ ಕಂಡುಕೊಂಡಿದ್ದ ಜ್ಞಾನಿಗಳ, ಕವಿಗಳ ಕೆಲವು ಸಾಲುಗಳನ್ನು ಗಮನಿಸಿ, ಮನೆಯೊಳಗಿದ್ದು ನಿಯಾಮಕನ ಸ್ಮರಣೆಯಲ್ಲಿ ತೊಡಗಿ, ಕೊಡಗಿನಲ್ಲಿ ಸೋಹಂ, ಧ್ಯಾನ, ಯೋಗ ಆರಂಭಿಸಿದ ಆಧ್ಯಾತ್ಮಿಕ ಗುರು ಕ|| ಬಿ. ಜಿ. ವೆಲ್ಲಾಳ್ ಅವರು ಹಾಡೊಂದನ್ನು ಬರೆದಿದ್ದರು. ಅವರು ಈ ರೀತಿ ಹೇಳುತ್ತಾರೆ. ಪೂರ್ತಿ ಪ್ರಾಪಂಚಿಕರಾಗಬೇಡಿ. ಎಲ್ಲದಕ್ಕೂ ಕಾರಣನಾದ ನಿಯಾಮಕನಿಗೆ ಶರಣಾಗುವದನ್ನೂ ಅಭ್ಯಾಸ ಮಾಡಿಕೊಳ್ಳಿ.
ಪ್ರೇಮ ಮತ್ತು ಭಕ್ತಿಯೊಂದಿಗೆ ಎಂದೆಂದೂ ಸೋಹಂ ಭಾವದಲ್ಲೇ ಇರಿ. ಸಮಸ್ಯೆಗಳಿಂದ ದೂರಾಗುವಿರಿ. ನಿಮ್ಮ ನಿಜತ್ವ ಮರೆತಾಗ ಪ್ರಕೃತಿ ವಿಕೋಪ ಎದುರಾಗುತ್ತದೆ, ಜೀವನ ಅಪಾಯದಲ್ಲಿ ಸಿಲುಕುತ್ತದೆ ಐಶ್ವರ್ಯ, ಜೀವ ನಷ್ಟವಾಗುತ್ತದೆ. ನದಿ ಉಕ್ಕಿ ಹರಿವಾಗ-ಪ್ರವಾಹ ಉಂಟಾದಾಗ, ನಿನ್ನ ಅಹಂಭಾವ ಉಪಯೋಗಕ್ಕೆಬಾರದು. ಧೈರ್ಯವಂತರೂ ಅಧೀರರಾಗು ತ್ತಾರೆ. ಸಾಂಕ್ರಾಮಿಕ ಹರಡಿ ಜನತೆ ಅದನ್ನು ಶಮನ ಮಾಡಲಾರರು. ಅದಕ್ಕೆ ಪರಿಹಾರ ಕಂಡುಹಿಡಿಯುವ ಮೊದಲೇ ಅವರು ಸಾಯುತ್ತಾರೆ. ಒಂದು ಸಮಸ್ಯೆ ಬಗೆಹರಿದಂತೆ ಮತ್ತೊಂದು ಉದ್ಭವವಾಗುತ್ತದೆ. ಮಾನವ ನನ್ನು ಕಿತ್ತುತಿನ್ನುವ ಈ ಸಮಸ್ಯೆಗೆ ಮೂಲ ಕಾರಣ ಏನೆಂದು ಕಂಡು ಹಿಡಿಯಿರಿ. ಹಿನ್ನೆಲೆಯಲ್ಲಿ ಸದಾ ಭಗವಂತ ಇರುತ್ತಾನೆ. ಸಮಸ್ಯೆಗಳಿಂದ ಮೇಲೇಳಲು ಭಗವಂತನಿಗೆ ಪೂರ್ತಿ ಶರಣಾಗಿ.
ಮನುಷ್ಯ ಎಷ್ಟು ವಿಚಲಿತನಾಗುತ್ತಾನೆ, ಸಮಸ್ಯೆಗಳು ಹೇಗೆ ಚಿಂತಿಸುವಂತೆ ಮಾಡುತ್ತವೆ ಎಂಬದಕ್ಕೆ ಯಾರೋ ಒಂದು ಇಂಗ್ಲೀಷ್ ಕವನ ಬರೆದಿದ್ದಾರೆ
ನಿದ್ರಾಲೋಕದಿಂದೆದ್ದೆ
ಪ್ರಪಂಚಕ್ಕೆ ಬಂದೆ
ಅಯ್ಯೋ ಡಿಸ್ನಿ ಲೋಕ ಪ್ರಪಂಚವಲ್ಲ |
ಫ್ಯಾರಿಸ್-ಅದು ಪ್ರೇಮಲೋಕವಲ್ಲ|
ಚೀನಾ ಗೋಡೆ ಅದು ಕೋಟೆಯಲ್ಲ|
ಆಲಿಂಗನ, ಮುತ್ತು ಪ್ರೇಮವಲ್ಲ
ಅವು ಆಯುಧಗಳಾಗಿವೆ |
ಪೋಷಕರು-ವಯಸ್ಸಾದವರನ್ನು
ಕಾಣುವದು-ಕಾಣುವದೇ ಅವರಿಗೆ ಅಪಾಯ !
ಅಧಿಕಾರ-ಯಾವದಕ್ಕೂ ಬೇಡ
ಹಣ-ಶಕ್ತಿ ಕಳೆದುಕೊಂಡ ಕಾಗದವಾಗಿದೆ|
ಭಗವಂತ ನೀನೊಬ್ಬನೇ ನನಗೀಗ ಭರವಸೆಯ ಕೊಂಡಿ!
1868ರಲ್ಲಿ ಪೊಲೀಸ್ ಹಾಗೂ ರಷ್ಯಾ ನಡುವೆ ಯುದ್ಧವಾಗುತ್ತದೆ. ದೇಶಗಳ ನಡುವೆ ಯುದ್ಧವಾದಾಗ ಸಾಮಾನ್ಯ ಪ್ರಜೆ ತತ್ತರಿಸಿ ಹೋಗುತ್ತಾನೆ ಸಾವೂ-ನೋವು ಸಾಮಾನ್ಯವಾಗುತ್ತದೆ. ಯುದ್ಧದ ಬಳಿಕದ ಚಿತ್ರಣವನ್ನು ಕವಿಯತ್ರಿ ಕಟ್ಳೀನ್ ಒಮೀರಾ ಎಂಬಾಕೆ ಮನಮುಟ್ಟುವಂತೆ ಬರೆಯುತ್ತಾಳೆ.
ಜನ ಮನೆ ಸೇರಿದರು
ಆಲಿಸಿದರು, ಓದಿದರು
ವಿಶ್ರಾಂತಿಗೈದರು,
ವ್ಯಾಯಾಮ ನಿರತರಾದರು
ಕಲೆಗಳಲ್ಲಿ ತೊಡಗಿದರು
ಆಡಿದರು, ಬಾಳುವ ಹೊಸ ರೀತಿ ಕಂಡರು
ವಿಚಲಿತರಾದರು, ಕೆಲವರು
ಧ್ಯಾನಿಸಿದರು, ಪ್ರಾರ್ಥಿಸಿದರು
ಕುಣಿದರು, ಕರಿನೆರಳ ಕಂಡರು
ಚಿಂತನೆ ಬದಲಾಯಿತು
ಭಾವನೆ ಬಿರಿಯಿತು
ಮತ್ತೆಃ ಕ್ರೂರಿಗಳಾಗಿ, ವಂಚಕರಾಗಿ
ಅಪಾಯಕಾರಿಯಾಗಿ, ಹೃದಯಶೂನ್ಯರಾಗಿ
ಬಾಳಿದವರೆಲ್ಲ ಮರೆಯಾದರು
ಭೂಮಿ ಹಸನಾಗಲಾರಂಭಿಸಿತು
ಪ್ರಫುಲ್ಲವಾಯಿತು, ಭಯ-ಅಪಾಯ
ಮರೆಯಾಯಿತು. ಒಗ್ಗಟ್ಟು ಉದ್ಭವಿಸಿತು
ಹೊಸ ಜೀವನ ತೆರೆಯಿತು
ಭೂಮಿಯ ಮುನಿಸು ತಣಿಯಿತು.
ಚರಿತ್ರೆಯ ಪುಟಗಳಲ್ಲಿ ಜನತೆ ಅಧೀರರಾದ ಘಟನೆಗಳು, ಮನೆಗಳಲ್ಲೇ ಅವಿತಿರಬೇಕಾದ ಪ್ರಕರಣಗಳು ಸಾಕಷ್ಟು ಇವೆ. ಹಾಗೆಂದು ನಮ್ಮ ಮುಠ್ಠಾಳತನದಿಂದ ನಾವುಗಳು ಚರಿತ್ರೆಯ ಪುಟಗಳಲ್ಲಿ ಕಾಣುವಂತಾಗುವದು ಬೇಡ. ಕಡ್ಡಾಯವಾಗಿ ಮನೆಗಳಲ್ಲಿರಿ ಸಂಪರ್ಕದಿಂದ ದೂರವಿರಿ. ಸ್ವಚ್ಛತೆಗೆ ಆದ್ಯತೆ ನೀಡಿ, ಒಂದಷ್ಟು ಜ್ಞಾನ ಸಂಪಾದಿಸಿಕೊಂಡು, ಮುಂದಿನ ಪೀಳಿಗೆ ಸಂಸ್ಕøತಿ-ಸಂಸ್ಕಾರ ಹೆಚ್ಚಿಸಿಕೊಳ್ಳು ವಂತಾಗಿ.
?ಬಿ. ಜಿ. ಅನಂತಶಯನ, ಸಲಹಾ ಸಂಪಾದಕ.