ಮಡಿಕೇರಿ, ಮಾ. 26: ಕೋವಿಡ್-19 ಹರಡುತ್ತಿರುವ ಈ ಸಂದರ್ಭದಲ್ಲಿ, ಸಾಮಾನ್ಯರಾದ ನಮ್ಮೆಲ್ಲರಿಗೆ ಮನೆಯೊಳಗೆ ಸುರಕ್ಷಿತವಾಗಿರುವದೇ ಒಂದು ದೊಡ್ಡ ಸಮಸ್ಯೆಯಂತೆ ತೋಚುತ್ತದೆ. ಎಲ್ಲರಿಗೂ ಅವರದ್ದೇ ಆದ ಚಿಂತೆಗಳಿದ್ದು, ಅವರವರ ಚಿಂತೆ ಅವರವರಿಗೆ ಭಾರವಾಗಿರುತ್ತದೆ. ಆದರೆ, ಎಲ್ಲರಿಗಿಂತ ಅತೀ ದುಸ್ತರವಾದ ಹಾಗೂ ಅತೀ ಅಪಾಯಕಾರಿಯಾದ ಜವಾಬ್ದಾರಿಯುತ ಕಾರ್ಯವನ್ನು ಸರಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಯಲ್ಲಿರುವವರು ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಹೋಲಿಸಿದಾಗ ಈ ವಿಷಯದಲ್ಲಿ ಸಾಮಾನ್ಯರಾದ ನಮ್ಮೆಲ್ಲರಿಗೆ ಸರ್ಕಾರಿ ಆಸ್ಪತ್ರೆಯ ಸುತ್ತಲೂ ಓಡಾಡಲೂ ಕೂಡ ಭಯ - ಎಲ್ಲಿ ನಮಗೆ ಕೊರೊನಾ ವೈರಸ್‍ನ ಸೊಂಕು ಹಬ್ಬಿಬಿಡುತ್ತದೋ ಎಂಬ ಆತಂಕ. ಆದರೆ, ನಾವು ಕನಿಷ್ಟ ಪಕ್ಷ ದಿನನಿತ್ಯ ‘ಐಸೊಲೇಶನ್ ವಾರ್ಡ್’ನಲ್ಲಿ ಕಾರ್ಯ ನಿರ್ವಸುತ್ತಿರುವ ವೈದ್ಯಕೀಯ ಶುಶ್ರೂಷಾ ತಂಡಕ್ಕೆ ನಾವು ಆಭಾರಿಗಳಾಗಿರಬೇಕು. ವೈದ್ಯಕೀಯ ಸೇವೆಯನ್ನು ಇತರ ಯಾವದಕ್ಕೂ ಹೋಲಿಸಲು ಅಸಾಧ್ಯ. ‘ವೈದ್ಯಕೀಯ ಸೇವೆ ದೇವರ ಸೇವೆಗಿಂತಲೂ ಮಿಗಿಲು’ ಎಂಬುದನ್ನು ವಿಶ್ವದ ಎಲ್ಲಾ ವೈದ್ಯರು ತೋರಿಸಿಕೊಟ್ಟಿದ್ದಾರೆ. ಇಂಟರ್‍ನೆಟ್‍ನಲ್ಲಿ ನಾವು ಇತರ ದೇಶಗಳ ವೈದ್ಯರ ಪ್ರಯತ್ನಗಳನ್ನು ಶೇರ್‍ಮಾಡಿ, ಕೆಲವು ‘ಲೈಕ್’ಗಳನ್ನು ಈ ಪೋಸ್ಟ್‍ಗೆ ಕಳುಹಿಸಿ ಖುಷಿಪಡುತ್ತೇವೆ. ಹಲವಾರು ದೇಶಗಳಲ್ಲಿ ವೈದ್ಯರೇ ತಮ್ಮ ಪ್ರಶಂಸನೀಯ ಕಾರ್ಯಗಳ ಪೋಸ್ಟ್‍ಗಳನ್ನು ತಾವಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುತ್ತಾರೆ.