ಮಡಿಕೇರಿ, ಮಾ. 24: ಮಹಾಮಾರಿ ಕೊರೊನಾ ವೈರಸ್‍ಗೆ ತುತ್ತಾಗಿ ಕೊಂಡಂಗೇರಿ ಬಳಿಯ ಕುತ್ತುಮೊಟ್ಟೆ ನಿವಾಸಿಯೋರ್ವ ಜಿಲ್ಲಾಡಳಿತ ಸ್ಥಾಪಿತ ಐಸೋಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾನೆ.

ಈತ ವಾಸವಿರುವ ಕುತ್ತುಮೊಟ್ಟೆ ಗ್ರಾಮವನ್ನು ನಿಷೇದಿತ ವಲಯ (ಕಂಟೈನ್‍ಮೆಂಟ್ ಏರಿಯಾ) ಎಂದು ಪರಿಗಣಿಸಿ, 75 ಕುಟುಂಬಗಳಿಗೆ ಗೃಹಬಂಧನ ವಿಧಿಸಿ ಅವರುಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಉಚಿತವಾಗಿ ನೀಡುತ್ತಿದೆ. ಇದನ್ನು ಗಮನಿಸಿದ ನೆರೆಯ ಕೊಂಡಂಗೇರಿ ಗ್ರಾಮದವರೂ ಕೂಡ ಕೊಂಡಂಗೇರಿಯನ್ನು ನಿಷೇದಿತ ವಲಯ ಎಂದು ಘೋಷಿಸುವಂತೆ ಅಧಿಕಾರಿಗಳಲ್ಲಿ ದುಂಬಾಲು ಬೀಳುತ್ತಿರುವ ವಿಚಾರ ತಿಳಿದು ಬಂದಿದೆ. ಗ್ರಾಮದಲ್ಲಿ ಅಂಗಡಿಗಳಿದ್ದರೂ ಅಧಿಕಾರಿಗಳು ಸುಳಿದಾಡುವ ಸಂದರ್ಭ ಅವುಗಳನ್ನು ಬಂದ್ ಮಾಡಿಸಿ ಗ್ರಾಮಸ್ಥರಿಗೆ ಯಾವುದೇ ಸಾಮಗ್ರಿಗಳು ದೊರಕುತ್ತಿಲ್ಲವೆಂದು ನೆಪ ಹೇಳುತ್ತಾ, ನಿಷೇದಿತ ವಲಯವನ್ನಾಗಿ ಘೋಷಿಸುವಂತೆ ಬೇಡಿಕೆ ಇಟ್ಟಿರುವುದು ತಿಳಿದು ಬಂದಿದೆ...!