ಸೋಮವಾರಪೇಟೆ, ಮಾ. 24: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿರುವ ಲಾಕ್‍ಡೌನ್ ಸೂಚನೆಗೆ ಎರಡನೇ ದಿನ ಸೋಮವಾರಪೇಟೆಯಲ್ಲಿ ಗೊಂದಲ ಮನೆ ಮಾಡಿತು. ಧ್ವನಿವರ್ಧಕದ ಮೂಲಕ ತದ್ವಿರುದ್ಧ ಮಾಹಿತಿಗಳು ಹೊರಬಂದ ಹಿನ್ನೆಲೆ ಸಾರ್ವಜನಿಕರು ಪರದಾಡಿದರು.
ಇಂದು ಬೆಳಿಗ್ಗೆ ಆಟೋವೊಂದ ರಲ್ಲಿ ಮೈಕ್ ಕಟ್ಟಿಕೊಂಡು ಪಟ್ಟಣದಲ್ಲಿ ಸಂಚರಿಸುತ್ತಾ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಅಗತ್ಯ ವಸ್ತುಗಳಾದ ತರಕಾರಿ ಮತ್ತು ದಿನಸಿ ಅಂಗಡಿಗಳನ್ನು ತೆರೆಯಬಹುದು ಎಂದು ಸೂಚನೆ ನೀಡಲಾಗಿತ್ತು.
ಅದರಂತೆ ಮಧ್ಯಾಹ್ನದ ವೇಳೆಗೆ ಪಟ್ಟಣದ ಕ್ಲಬ್‍ರಸ್ತೆ, ಮುಖ್ಯರಸ್ತೆಯಲ್ಲಿ ರುವ ಅಂಗಡಿಗಳು ತೆರೆದವು. ಸಾರ್ವಜನಿಕರು ಅಂಗಡಿಗಳಿಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಂತೆಯೇ, ಮತ್ತೆ ಮೈಕ್ ಕಟ್ಟಿದ್ದ ಆಟೋದಲ್ಲಿ ಆಗಮಿಸಿ, ಆದೇಶ ತೆಗೆಯಲಾಗಿದ್ದು, ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಯಿತು.
ಇದರಿಂದಾಗಿ ಸಾರ್ವಜನಿಕರು ತೀವ್ರ ಗೊಂದಲಕ್ಕೆ ಒಳಗಾದರು. ಬೆಳಿಗ್ಗೆ 12 ರಿಂದ 2ರವರೆಗೆ ಅಂಗಡಿ ತೆರೆಯಿರಿ ಎಂದವರೇ ಮಧ್ಯಾಹ್ನ ಅಂಗಡಿ ತೆರೆಯಬೇಡಿ ಎಂದು ಹೇಳಿದ್ದರಿಂದ ಸಾರ್ವಜನಿಕರಿಗೆ ಕಸಿವಿಸಿಯಾಯಿತು. ಈ ಮಧ್ಯೆ ಮುಖ್ಯರಸ್ತೆಯಲ್ಲಿ ತೆರೆದಿದ್ದ ಅಂಗಡಿಯನ್ನು ಪೊಲೀಸರೇ ಮುಚ್ಚಿಸಿದರು.
ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲೆಂದು ಸರ್ಕಾರವೇ ನಿಗದಿಪಡಿಸಿದ್ದ ಸಮಯಕ್ಕೆ ಮನೆಯಿಂದ ಹೊರಬಂದ ಮಂದಿ, ತದ್ವಿರುದ್ಧ ಸೂಚನೆಗಳಿಂದ ಗೊಂದಲಕ್ಕೆ ಒಳಗಾದರು. ಕೆಲವರು ಅರ್ಧಂಬರ್ಧ ದಿನಸಿ ಖರೀದಿಸಿ ಮನೆಗೆ ವಾಪಸ್ ಆದರು.
ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರಿಂದ ‘ಶಕ್ತಿ’ ಸ್ಪಷ್ಟನೆ ಕೇಳಿದ ಸಂದರ್ಭ, ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತ ಸುತ್ತಮುತ್ತಲ ಅಂಗಡಿಗಳನ್ನು ಹೊರತುಪಡಿಸಿ ಮಿಕ್ಕ ಅಂಗಡಿಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತಲಲ್ಲಿ ಜನಜಂಗುಳಿ ಅಧಿಕವಾಗುವ ಹಿನ್ನೆಲೆ ಬಸ್ ನಿಲ್ದಾಣ ಆವರಣವನ್ನು ಹೊರತುಪಡಿಸಿ ಉಳಿದೆಡೆ 12 ರಿಂದ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಒಟ್ಟಾರೆ ಸರ್ಕಾರದ ಆದೇಶದ ಅನುಷ್ಠಾನದಲ್ಲಿ ಒಂದಿಷ್ಟು ಗೊಂದಲಗಳು ಉಂಟಾದವು. ಮಧ್ಯಾಹ್ನ 1.30ರ ವೇಳೆಗೆ ಮತ್ತೆ ಪಟ್ಟಣದಲ್ಲಿರುವ ತರಕಾರಿ ಅಂಗಡಿ ತೆರೆಯಿತು. ಒಂದಿಷ್ಟು ದಿನಸಿ ಅಂಗಡಿಗಳು ತೆರಯಲ್ಪಟ್ಟು, ವ್ಯಾಪಾರ ವಹಿವಾಟು ನಡೆಸಿದವು.
ಬೆಳ್ಳಂಬೆಳಗ್ಗೆ ತೆರೆದ ಅಂಗಡಿ: ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳನ್ನು ಮಧ್ಯಾಹ್ನ 12 ರಿಂದ 2ರವರೆಗೆ ಖರೀದಿಸಲು ಸರ್ಕಾರ ಆದೇಶ ನೀಡಿದ್ದರೂ ಸಹ ಪಟ್ಟಣದಲ್ಲಿರುವ ಎರಡು ತರಕಾರಿ ಮತ್ತು ಒಂದು ದಿನಸಿ ಅಂಗಡಿ ಬೆಳಗ್ಗೆ 7 ಗಂಟೆಗೆ ತೆರೆದು ವ್ಯಾಪಾರ ವಹಿವಾಟು ನಡೆಸಿದವು.
ಇದರಿಂದಾಗಿ ಎರಡೂ ಅಂಗಡಿಗಳ ಮುಂದೆ ಜನಜಂಗುಳಿ ಕಂಡುಬಂತು. 8.30 ಸುಮಾರಿಗೆ ಆಗಮಿಸಿದ ಪೊಲೀಸರು ಎರಡೂ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿ, ಅಂಗಡಿ ಎದುರಿದ್ದ ಸಾರ್ವಜನಿಕರಿಗೆ ಲಾಠಿ ತೋರಿಸಿ ಗುಂಪನ್ನು ಚದುರಿಸಿದರು.
ಐಗೂರಿನಲ್ಲಿ ಲಾಠಿ ಚಾರ್ಜ್: ಸಮೀಪದ ಐಗೂರು ಗ್ರಾಮದ ಜಂಕ್ಷನ್‍ನಲ್ಲಿ ಅಂಗಡಿ ಎದುರು ಕುಳಿತಿದ್ದ ಮಂದಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಗುಂಪು ಗುಂಪಾಗಿ ಸೇರಬಾರದು ಎಂಬ ಆದೇಶವಿದ್ದರೂ ಗುಂಪುಗೂಡಿದ್ದು ಯಾಕೆ? ಎಂದು ಪ್ರಶ್ನಿಸಿದ ಪೊಲೀಸರು, ಕೆಲವರಿಗೆ ಲಾಠಿ ಚಾರ್ಜ್ ಮಾಡಿ ಓಡಿಸಿದರು.
ಮೊಬೈಲ್ ತರಕಾರಿ ಸೇವೆ: ಪಟ್ಟಣದಲ್ಲಿ ತರಕಾರಿ ಅಂಗಡಿಗಳು ಬಂದ್ ಆಗಿದ್ದರಿಂದ ವರ್ತಕರು ವಾಹನಗಳಲ್ಲಿ ಬೀದಿ ಬೀದಿಗೆ ತೆರಳಿ ತರಕಾರಿ ಮಾರಾಟ ಮಾಡಿದರು. ಗೂಡ್ಸ್ ಆಟೋ, ಪಿಕ್‍ಅಪ್‍ನಲ್ಲಿ ಗ್ರಾಮಾಂತರ ಪ್ರದೇಶಕ್ಕೆ ತೆರಳಿ ತರಕಾರಿ ಮಾರಿದರು. ಕೆಲವರು ಪಟ್ಟಣದ ಮಾರುಕಟ್ಟೆಯಲ್ಲಿ ಅಂಗಡಿ ಹಾಕಿ ತರಕಾರಿಗಳನ್ನು ಮಾರಿದರು.
ಪಟ್ಟಣ ಖಾಲಿ ಖಾಲಿ: ಲಾಕ್‍ಡೌನ್ ಹಿನ್ನೆಲೆ ಸೋಮವಾರ ಪೇಟೆ ಪಟ್ಟಣ ಖಾಲಿ ಖಾಲಿಯಾಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಬಿಕೋ ಎನ್ನುವ ಸನ್ನಿವೇಶ ಕಂಡುಬಂತು. ಮಡಿಕೇರಿ ಯಿಂದ ಒಂದು ಪೊಲೀಸ್ ಡಿ.ಆರ್. ತುಕಡಿಯ ಸಿಬ್ಬಂದಿಗಳು ಪಟ್ಟಣದ ಬಸ್‍ನಿಲ್ದಾಣದಲ್ಲಿ ಬೀಡುಬಿಟ್ಟಿದ್ದು, ಜನರು ಗುಂಪುಗೂಡದಂತೆ ಗಮನ ಹರಿಸಿದ್ದರು.
ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು. ತಾಲೂಕು ಕಚೇರಿ ತೆರೆದಿತ್ತಾದರೂ ಸಾರ್ವಜನಿಕರು ಮಾತ್ರ ಅತ್ತ ತಲೆಹಾಕಲೇ ಇಲ್ಲ. ಪಟ್ಟಣಕ್ಕೆ ಹೋದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಹೆದರಿದ ಗ್ರಾಮೀಣ ಭಾಗದ ಮಂದಿ ಪಟ್ಟಣದತ್ತ ಆಗಮಿಸದೇ ಮನೆಯಲ್ಲೇ ಉಳಿದರು.
ನಿನ್ನೆ ರಾತ್ರಿ ವೇಳೆಯಲ್ಲಿ ಜಿಲ್ಲೆಯ ಹೊರಭಾಗದಿಂದ ಹಲವಷ್ಟು ವಾಹನಗಳು ಸೋಮವಾರಪೇಟೆ ವ್ಯಾಪ್ತಿಗೆ ಆಗಮಿಸಿದವು. ಕೊರೊನಾ ಹಿನ್ನೆಲೆ ಲಾಕ್‍ಡೌನ್ ಮತ್ತು ಯುಗಾದಿ ಹಬ್ಬದ ಹಿನ್ನೆಲೆ ದೂರದ ಊರುಗಳಲ್ಲಿ ನೆಲೆಸಿದ್ದ ಮಂದಿ ಸ್ವಂತ ವಾಹನದಲ್ಲಿ ಸ್ವಗ್ರಾಮಕ್ಕೆ ಮರಳಿದರು. ರಾತ್ರಿಯಿಡೀ ಆಗಾಗ್ಗೆ ರಸ್ತೆಯಲ್ಲಿ ವಾಹನಗಳ ಕಣಿವೆ: ಸಿಹಿ-ಕಹಿಯನ್ನು ಸಮಾನವಾಗಿ ನೀಡೆಂದು ದೇವರಲ್ಲಿ ಬೇಡುವ ಹಿಂದೂಗಳ ಹೊಸ ವರ್ಷದ ಪವಿತ್ರ ಹಬ್ಬ ಯುಗಾದಿ ಈ ಬಾರಿ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ಹೊತ್ತು ತಂದು ಬಿಟ್ಟಿದೆ ಎನಿಸುತ್ತಿದೆ. ಏಕೆಂದರೆ ಕೊರೊನಾ ಎಂತಹಾ ಸ್ಥಿತಿಯನ್ನು ತಂದಿಟ್ಟಿದೆ ಎಂದರೆ ಈ ಬಾರಿ ಯುಗಾದಿಯನ್ನು ಆಚರಿಸಲು ಸಾಮಗ್ರಿ ಸರಂಜಾಮು ಖರೀದಿ ಇರಲಿ, ಯುಗಾದಿಯ ಪ್ರತೀಕವಾದ ಬೇವು ಹಾಗೂ ಮಾವಿನ ಸೊಪ್ಪು ಖರೀದಿಗೂ ಕೊರೊನಾ ಕಂಟಕವನ್ನು ತಂದಿಟ್ಟಿದೆ.
ಕೊರೊನಾ ವೈರಸ್ ಪರಸ್ಪರರಿಗೆ ಹಬ್ಬಬಾರದು ಎಂಬ ಉದ್ದೇಶಕ್ಕೆ ಜನರು ಮನೆಯಲ್ಲೇ ಇರಬೇಕು. ಕೊರೊನಾ ವೈರಸ್ ಅನ್ನು ದೂರ ಅಟ್ಟಬೇಕೆಂಬ ಕಾರಣಕ್ಕೆ ಸರ್ಕಾರ ವಿಧಿಸಿರುವ ಕಫ್ರ್ಯೂನಿಂದಾಗಿದೆ. ಈ ಬಾರಿಯ ಯುಗಾದಿ ಹಬ್ಬಕ್ಕೆ ಜನರು ಹೊಸ ಬಟ್ಟೆಗಳನ್ನು ಸಹ ಖರೀದಿಸಲು ಆಗಲಿಲ್ಲ. ಇನ್ನು ಯುಗಾದಿಯ ಪ್ರಮುಖ ಖಾದ್ಯವಾದ ಹೋಳಿಗೆ ಮಾಡಲು ಬೇಕಾದ ಬೆಲ್ಲ ಹಾಗೂ ಬೇಳೆಯನ್ನು ಖರೀದಿಸಲು ಕೂಡ ಅಂಗಡಿ ಮುಂಗಟ್ಟುಗಳು ಮುಚ್ಚಿದ ಪರಿಣಾಮ ಜನ ಹೈರಾಣಾಗಿದ್ದಾರೆ.
ಜನ ಜಂಗುಳಿ ಸೇರಬಾರದು. ಮಾರಕ ವೈರಸ್ ಹರಡಲು ಜಾಗ ಮಾಡಿಕೊಡಬಾರದು. ಅದಕ್ಕಾಗಿ ಜನರು ಅವರವರ ಮನೆಯಲ್ಲಿಯೇ ಇರಬೇಕು ಎಂದು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಮನವಿ ಮಾಡಿದರೂ ಕೂಡ ಜನರು ಕೇಳುತ್ತಿಲ್ಲ. ಕೊರೊನಾ ನಮಗೆ ಬರೋದಿಲ್ಲ ಎಂಬ ತಾತ್ಸಾರ ಈ ಜನಕ್ಕೆ ಇದ್ದಂತಿದೆ. ಇಲ್ಲಿ ನೋಡಿ, ಕುಶಾಲನಗರದ ಕುಡಿಯುವ ನೀರಿನ ಘಟಕವೊಂದರ ಬಳಿ ನೀರನ್ನು ಸಂಗ್ರಹಿಸಲು ಸಾಲು ನಿಂತ ಜನ...!