ಕಣಿವೆ, ಮಾ. 6: ಇದು ನದಿಯ ನೀರಿನ ಒಳಗೆ ಯಾವುದೇ ಪೈಪ್‍ಲೈನ್ ಅಳವಡಿಕೆಯಲ್ಲ. ಶುಂಠಿ ಬೆಳೆ ಬೆಳೆಯುವ ಅನೇಕರು ಶುಂಠಿ ಬೆಳೆಯಲು ಕಳೆದ ವರ್ಷ ಮೈಕ್ರೋ ನೀರಾವರಿಗೆ ಬಳಸಿದ ಪೈಪ್‍ಗಳನ್ನು ಮತ್ತೊಮ್ಮೆ ಬಳಸುವ ಮುನ್ನಾ ನದಿಯೊಳಗೆ ಪೈಪ್‍ಗಳನ್ನು ಮುಳುಗಿಸಿ ತೊಳೆದು ಮತ್ತೆ ಬಳಸುವು ದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದಿನ ಸಾಲಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಯಾವುದಾದರು ರೋಗಗಳು ಬಾಧಿಸಿದ್ದರೆ ಆ ವೈರಸ್ ಪೈಪ್‍ನಲ್ಲಿ ಅಂಟಿಕೊಂಡ ಮಣ್ಣಿನ ಜೊತೆ ಸೇರಿ ಮತ್ತೆ ಮುಂದಿನ ಸಾಲಿನಲ್ಲಿ ಬೆಳೆವ ಫಸಲಿನ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು ಎಂಬದು ಆ ಬೆಳೆಗಾರರ ಮುನ್ನೆಚ್ಚರಿಕೆ ಅಷ್ಟೆ. ಆದರೆ ನದಿಯ ನೀರನ್ನು ಕುಡಿಯುವ ಜನರ ಬಗ್ಗೆಯೂ ಆ ಬೆಳೆಗಾರರು ಒಂದಷ್ಟು ಎಚ್ಚರಿಕೆ ವಹಿಸಬೇಕಲ್ಲವೇ ಎಂಬುದು ಇಲ್ಲಿ ಪ್ರಶ್ನೆ.

ನದಿಯ ನೀರನ್ನು ಅಪಾರ ಜನ ಕುಡಿಯುವುದರಿಂದ ಮಲಿನ ಮಾಡಬಾರದು ಎಂದು ಎಷ್ಟೆಲ್ಲಾ ಜಾಗೃತೆ ಮೂಡಿಸಿ ಮತ್ತು ಜಾಗಟೆ ಬಾರಿಸಿದರೂ ಕೂಡ, ‘ನೀವು ನಿಮ್ ಕೆಲಸ ಮಾಡ್ತಾ ಇರಿ. ನಾವು ನಮ್ ಕೆಲಸ ಹೀಗೆ ಮಾಡ್ತಾನೆ ಇರ್ತೇವೆ’ ಎಂದು ವರ್ತಿಸುವ ಹಾಗಿದೆ ಈ ಜನರ ನಡೆ. ನದಿಯ ನೀರಿಗೆ ಕೇವಲ ಕೆಲವೇ ಜನ ವಾರಸುದಾರರಲ್ಲ. ಆಗಲೂ ಬಾರದು. ಆ ನದಿಯ ನೀರನ್ನು ಅವಲಂಬಿಸಿ ಬದುಕುತ್ತಿರುವ ಪ್ರತಿಯೊಬ್ಬರೂ ವಾರಸುದಾರರು ಆದಾಗ ಮತ್ತು ಆ ನದಿಯ ಬಗ್ಗೆ ಸ್ವಚ್ಛತೆ ಮತ್ತು ಪ್ರೇಮ ಎಲ್ಲರಲ್ಲೂ ಒಡಮೂಡಿದಾಗ ಮಾತ್ರ ಇಂತಹ ನದಿ ಮಲಿನದಂತಹ ಹೀನ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ.

ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬಿಸಿಲ ಝಳ ಒಂದಷ್ಟು ಈ ಬಾರಿ ಹೆಚ್ಚೇ ಇರುವುದರಿಂದ ಭೂಮಿ ಕಾಯುತ್ತಿದೆ. ಕಾದುನಿಂತ ಭೂಮಿಯಲ್ಲಿ ಕಾಫಿ, ಶುಂಠಿ ಮತ್ತಿತರ ಬೆಳೆಗೆ ನದಿಯ ನೀರನ್ನು ಮೇಲೆತ್ತಿ ಹಾಯಿಸುತ್ತಿ ರುವುದರಿಂದ ಕಾವೇರಿ ನದಿಯ ನೀರಿನ ಹರಿಯುವಿಕೆ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ಕಳೆದ ವರ್ಷ ಶಿವರಾತ್ರಿ ಹಬ್ಬದ ಬಳಿಕ ಮಳೆ ಬಿದ್ದು ಭೂಮಿಯನ್ನು ಒಂದಷ್ಟು ತಂಪು ಮಾಡಿತ್ತು. ಆದರೆ ಈ ಬಾರಿ ಇನ್ನೂ ಮಳೆಯ ಸುಳಿವೇ ಇಲ್ಲ. ವಾರ ಅಥವಾ ಹತ್ತು ದಿನಗಳಲ್ಲಿ ಮಳೆ ಸುರಿಯದಿದ್ದರೆ ಕಾವೇರಿ ನದಿಯ ನೀರು ಹರಿವನ್ನು ಸ್ಥಗಿತಗೊಳಿಸುವ ಸಂಭವ ಹೆಚ್ಚಿದೆ.

ಈ ವರ್ಷವಂತೂ ಎಲ್ಲೆಲ್ಲೂ ಶುಂಠಿ ಬಿತ್ತನೆ ಅತ್ಯಧಿಕ ಪ್ರಮಾಣದಲ್ಲಿ ಇರುವುದರಿಂದ ಕೊಳವೆ ಬಾವಿಗಳ ಮತ್ತು ಕಾವೇರಿ ನದಿಯಲ್ಲಿನ ನೀರನ್ನು ಮೇಲೆತ್ತುವ ಕಾರ್ಯ ಭರದಿಂದ ಎಲ್ಲೆಡೆ ಸಾಗಿವೆ. ಹಲವು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತಗೊಂಡು ಕೊಳವೆ ಬಾವಿಗಳು ಕೂಡ ತಮ್ಮ ಕೆಲಸ ನಿಲ್ಲಿಸಿವೆ. ಈ ನಡುವೆ ‘ಕಾವೇರಿ ನದಿಯಲ್ಲಿ ಹೂಳು ತುಂಬಿದೆ. ಅದನ್ನು ತೆಗೆದು ಮಳೆಗಾಲದಲ್ಲಿ ಬರಬಹುದಾದ ಪ್ರವಾಹ ನಿಯಂತ್ರಿಸಿ’ ಎಂದು ಕಾವೇರಿ ನದಿಯ ಕೆಲವು ಪ್ರವಾಹ ಪೀಡಿತರು ಸರ್ಕಾರಕ್ಕೆ ಮನವಿ ಬೇರೆ ಸಲ್ಲಿಸಿದ್ದಾರೆ. ಆದರೆ ನದಿ ಎಲ್ಲರನ್ನು ಕೂಗಿ ಕರೆದು ಮೊರೆಯಿಟ್ಟು ಬೇಡುತ್ತಿದೆ. ‘ನನ್ನೊಳಗೆ ಯಾವುದೇ ಹೂಳೆಂಬುದಿಲ್ಲ. ಆ ಹೂಳು ಇದ್ದಿದ್ದರೆ ನನ್ನೊಡಲ ಬಾಯ್ದೆರೆಯುತ್ತಿದ್ದೆ. ಬಿರುಕುಗಳ ಮೂಲಕ ನಿಮಗೆ ನನ್ನಳಲು ಹೇಳುತ್ತಿದ್ದೆ. ನನಗೆ ಜೀವ ಜಂತುಗಳು ಮತ್ತು ಪಕ್ಷಿ ಪ್ರಾಣಿಗಳು ಮುಳುವಲ್ಲ. ಮಾನವರಾದ ನಿಮ್ಮ ಹಸ್ತಕ್ಷೇಪವೇ ನನ್ನ ನೆಮ್ಮದಿಗೆ ಮುಳ್ಳಾಗಿ ಪರಿಣಮಿಸಿದೆ. ಯಾರಿಗೂ ಕೆಡುಕು ಮಾಡದೇ, ಎಲ್ಲರ ದಾಹವನ್ನು ನೀಗುತ್ತಾ, ನನ್ನೊಡಲ ಕೃಷಿಕರ ಬೆಳೆಗಳ ಸಂಜೀವಿನಿಯಾಗಿರುವ ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ. ನನ್ನೊಳಗೆ ತ್ಯಾಜ್ಯ ಬಿಸಾಕುವುದು ಬಿಡಿ. ನಿಮ್ಮ ಮನೆಗಳ ತ್ಯಾಜ್ಯ ನೀರು ನನ್ನಲ್ಲಿಗೆ ಬಿಡದಿರಿ. ನೀವು ಹಾಕುವ ಬಟ್ಟೆಗಳ ತೊಳೆಯಲು ನನ್ನೊಳಗೆ ಹಾಕುವ ಸೋಪು, ಡಿಟರ್ಜೆಂಟ್‍ಗಳನ್ನು ನಿಮ್ಮ ಮನೆಯೊಳಗೆ ಹಾಕಿಕೊಳ್ಳಿ. ನೀವು ಮನೆ ಕಟ್ಟಿಕೊಳ್ಳಲು ನನ್ನ ಸೆರಗೇ ಬೇಕಾ? ಮನೆ ಕಟ್ಟಿದ ಬಳಿಕ ಉಳಿಕೆಯ ತ್ಯಾಜ್ಯ ಸುರಿಯಲು ನನ್ನೊಡಲೇ ಬೇಕಾ?’

‘ಬೇಡಾ... ಬೇಡಾ... ಇನ್ನಾದರೂ ಬಿಟ್ಟು ಬಿಡಿ. ನನಗೆ ನಿತ್ಯವೂ ನೀವು ನೀಡುತ್ತಿದ್ದ ನಿಮ್ಮ ಕಾಟ, ನಿಮ್ಮ ಹಿಂಸೆ, ಅನಾಚಾರ, ಆಕ್ರಮಣ, ಅಷ್ಟೇ ಏಕೆ ನಾನು ನೀವು ಹಾಕುವ ತ್ಯಾಜ್ಯವೆಲ್ಲಾ ನನ್ನೊಳಗೆ ಹಾಕಿಕೊಂಡಾಗ ನಾನು ಶುಭ್ರವಾಗಿ ಹರಿದು ಮತ್ತೆ ನಿಮಗೇನೇ ಕುಡಿಯುವ ಶುದ್ಧ ನೀರು ನೀಡಲು ಸಹಕರಿಸುತ್ತಿದ್ದ ಆ ಮರಳ ರಾಶಿ ಯನ್ನೆಲ್ಲಾ ಕದ್ದು ಮುಚ್ಚಿ ರಾತೋರಾತ್ರಿ ದೋಚಿದಿರಿ. ಮತ್ತೆ ನೀವು ನನ್ನ ಮೇಲೆ ನಿತ್ಯವೂ ಮಾಡುತ್ತಿದ್ದ ಅನಾಚಾರವೆಲ್ಲ ತಡೆದು ತಡೆದು ನನ್ನೊಳಗಿನ ಸಹನೆಯ ಕಟ್ಟೆ ಒಡೆದು ಎರಡು ಬಾರಿ ನೀವು ಇರುವಲ್ಲಿಗೆ ಪ್ರವಾಹದ ರೂಪದಲ್ಲಿ ಬಂದೆ. ಆದರೂ ನಿಮಗೆ ನನ್ನ ನೋವು, ಆ ಸಂಕಟ ಅರ್ಥವಾಗುತ್ತಿಲ್ಲವೇ? ಈಗ ನನ್ನ ಗರ್ಭವನ್ನೇ ಬೇಧಿಸುವ ಹೂಳು ತೆಗೆಯಿರಿ ಎಂಬ ಹೊಸ ಹಿಂಸೆ ನೀಡಲು ಹೊರಟಿರುವಿರಾ. ಇದನ್ನು ನಾನು ಸಹಿಸಲಾರೆ. ದಕ್ಷಿಣದ ಗಂಗೆಯಾಗಿ ನನ್ನ ಸುಪರ್ದಿಯಲ್ಲಿರುವ ಅನೇಕ ಶಿವ ದೇವಾಲಯಗಳ ಶಿವಲಿಂಗಗಳ ಅಭಿಷೇಕಕ್ಕೆ ಕಾರಣವಾಗಿರುವ ನನ್ನ ಜೀವಂತ ಹರಿವನ್ನೇ ಅಣಕಿಸುತ್ತಿದ್ದೀರಾ ನೀವು...? ನಿಮ್ಮ ನೆಮ್ಮದಿಗೆ ನನ್ನೊಳಗೆ ಹೂಳು ತುಂಬಿದೆ ಎಂದು ಏನಾದರೂ ನನ್ನ ಗರ್ಭಕ್ಕೆ ಕೈಹಾಕಿದರೆ ಶಾಶ್ವತವಾಗಿ ಹರಿವನ್ನೇ ಸ್ಥಗಿತಗೊಳಿಸಿದರೆ ಏನು ಮಾಡುವಿರಿ? ಆಮೇಲೆ ಇನ್ನೆಲ್ಲಿ ಹೋಗುವಿರಿ? ಯಾರನ್ನು ಬೇಡು ವಿರಿ? ಈಗಲೂ ಶಾಂತಚಿತ್ತಳಾಗಿ ಬೇಡುತ್ತಿದ್ದೇನೆ. ನನ್ನ ಸಹವಾಸಕ್ಕೆ ಕೆಲವಷ್ಟು ಸಮಯ ನೀವು ಬರಬೇಡಿ. ನನಗೆ ನಿಮ್ಮಿಂದ ಈವರೆಗೆ ಆಗಿರುವ ಆ ಮಲೀನತೆ, ಆಕ್ರಮಣ, ಅತಿಕ್ರಮಣ ಎಲ್ಲವನ್ನು ನಾನೇ ಸರಿಮಾಡಿಕೊಂಡು ಸ್ವಚ್ಛಂದವಾಗಿ ಹರಿಯಲು ನನ್ನನ್ನು ಬಿಡಿ ಎಂದು ಕಾವೇರಿ ಮಾತೆ ಬೇಡುತ್ತಿದ್ದಾಳೆ. ಬನ್ನಿ ಈಗಲೂ ನಾವೆಲ್ಲರೂ ಕಾವೇರಿ ಮಾತೆಯನ್ನು ರಕ್ಷಿಸೋಣ. ತ್ಯಾಜ್ಯ ಕಸ ಕಡ್ಡಿಗಳನ್ನು ಎಸೆಯದಂತೆ ಪ್ರಯತ್ನಿ ಸೋಣವೇ...!? ಕಾವೇರಿ ಕರುಳ ಕೂಗು ಯಾರಿಗೂ ಕೇಳಿಸುತ್ತಿಲ್ಲವೇಕೆ...?

- ಕೆ.ಎಸ್. ಮೂರ್ತಿ.