ಗೋಣಿಕೊಪ್ಪಲು, ಮಾ.6: ಮಹಿಳೆಯರಿಗೆ ಗುಂಪು ಗುಂಪಾಗಿ ಸಾಲ ನೀಡಿ ಅಧಿಕ ಬಡ್ಡಿ ವಸೂಲಾತಿ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ನಗರದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ವೀರಾಜಪೇಟೆ ತಾಲೂಕು ಸಮಿತಿಯ ಮುಖಂಡರಾದ ಹೆಚ್.ಎ.ಪುಷ್ಪ ಹರೀಶ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊನ್ನಂಪೇಟೆ ರಸ್ತೆಯಿಂದ ಮೆರವಣಿಗೆ ಸಾಗಿ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡು ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಎ.ಪುಷ್ಪ ಹರೀಶ್ ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ಏಜೆಂಟರು ಹೊತ್ತಿಲ್ಲದ ಹೊತ್ತಿನಲ್ಲಿ ಮಹಿಳೆಯರ ಮನೆಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಲ ಮರುಪಾವತಿಸುವಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನಿರಂತರವಾಗಿ ಇವರಿಂದ ಕಿರುಕುಳಗೊಂಡ ಮಹಿಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಗುಂಪು ಗುಂಪಾಗಿ ಬರುವ ಇವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇಂತಹವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮತ್ತೋರ್ವ ಸಮಾಜ ಸೇವಕಿ ಕುಸುಮ ಚಂದ್ರಶೇಖರ್ ಮಾತನಾಡಿ; ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ಈ ಹಿಂದೆಯೂ ಹೋರಾಟ ನಡೆಸಿದ್ದೆವು. ಆದರೂ ಕಿರುಕುಳ ನಿಂತಿಲ್ಲ. ಸಾಲ ಪಡೆದಿರುವವರು ಕೂಲಿ ಕಾರ್ಮಿಕರಾಗಿರುವುದರಿಂದ ಸಾಲ ಮರುಪಾವತಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಂದೆಯೂ ಪ್ರತಿಭಟನೆ ಕೈಗೊಳ್ಳಲಾಗುವುದೆಂದರು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಸರ್ಕಾರ ಮಟ್ಟದ ಅಧಿಕಾರಿಗಳು ಆಗಮಿಸಿ ಸದ್ಯಕ್ಕೆ ಯಾವುದೇ ಹಣವನ್ನು ಪಾವತಿಸುವುದು ಬೇಡ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ಸರ್ಕಾರದ ಅಧಿವೇಶನದ ಸಂದರ್ಭ ಈ ವಿಷಯವನ್ನು ಪ್ರಸ್ತಾಪಿಸಿ ಸಾಲ ಮನ್ನ ಮಾಡಿಸುವ ಭರವಸೆ ನೀಡಿದ್ದಾರೆ. ಅಧಿವೇಶನ ನಡೆಯು ತ್ತಿದ್ದು, ಇದರ ಬಗ್ಗೆ ಸರ್ಕಾರದ ತೀರ್ಮಾನ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ಯಾವುದೇ ಫೈನಾನ್ಸ್ ನವರು ಹಣ ವಸೂಲಾತಿಗೆ ಮಹಿಳೆಯರ ಮನೆಗೆ ತೆರಳುವುದನ್ನು ಹಾಗೂ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ತಡೆಗಟ್ಟಬೇಕೆಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿಯವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಂಜುಳ, ಹೆಚ್.ಆರ್. ಪರಶುರಾಮ್, ಮಂಜುನಾಥ್, ಮುಂತಾದವರು ಪಾಲ್ಗೊಂಡದ್ದರು.-ಹೆಚ್.ಕೆ.ಜಗದೀಶ್