ಮಡಿಕೇರಿ, ಮಾ. 6: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗಾಗಿ ಇದೀಗ ಆನ್ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ದೇಶದ ವಿವಿಧೆಡೆಗಳಿಂದ ಇದಕ್ಕಾಗಿ ಸಿದ್ಧಪಡಿಸಿರುವ ವೆಬ್ಸೈಟ್ ಮೂಲಕ ಪ್ರವಾಸಿಗರು ತಮ್ಮ ಟಿಕೆಟನ್ನು ಕಾಯ್ದಿರಿಸಿಕೊಳ್ಳುವ ಅವಕಾಶವಿದೆ. ಫೆಬ್ರವರಿ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದ್ದ ಈ ಕ್ರಮವನ್ನು ಮಾರ್ಚ್ನಿಂದ ಕಡ್ಡಾಯಗೊಳಿಸಿ ಜಾರಿಗೆ ತರಲಾಗಿದೆ.
ತಿತಿತಿ. ಟಿಚಿgಚಿಡಿಚಿhoಟeಣigeಡಿಡಿeseಡಿve.ಛಿom ವೆಬ್ಸೈಟ್ ಮೂಲಕ ಪ್ರವಾಸಿಗರು ತಮ್ಮ ಸಫಾರಿಯನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರಸ್ತುತ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಂತೆ ಕೊಡಗಿನ ಗಡಿಯ ಒಳಗೆ ಬರುವ ನಾಗರಹೊಳೆ ನೆರೆಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವೀರನ ಹೊಸ ಹಳ್ಳಿ ಹಾಗೂ ದಮ್ಮನಕಟ್ಟೆ (ಅಂತರಸಂತೆ)ಯಲ್ಲಿ ಸಫಾರಿಯಲ್ಲಿ ಅವಕಾಶವಿದೆ.
ನಾಗರಹೊಳೆಯಲ್ಲಿ 26 ಆಸನದ ಒಂದು ವಾಹನವಿದ್ದು ಇದರಲ್ಲಿ 16 ಸೀಟ್ಗಳನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶವಿದೆ. ಉಳಿದ 10 ಸೀಟ್ಗಳನ್ನು ಸ್ಥಳೀಯವಾಗಿ ಕಾಯ್ದಿರಿಸಲಾಗುತ್ತಿದ್ದು ಇದರಲ್ಲಿ ಮೊದಲು ಬಂದವರಿಗೆ (ಫಸ್ಟ್ ಕಮ್ ಫಸ್ಟ್ ಪ್ರಿಫರೆನ್ಸ್) ಆದ್ಯತೆ ನೀಡಲಾಗುವದು ಎಂದು ನಾಗರಹೊಳೆ ಎ.ಸಿ.ಎಫ್. ಪೌಲ್ ಆ್ಯಂಟನಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದರು. ಇಲ್ಲಿಂದ ಬೆ.6.30ಕ್ಕೆ ಹಾಗೂ ಅಪರಾಹ್ನ 2.30ಕ್ಕೆ ಸಫಾರಿ ಇದೆ.
ವೀರನ ಹೊಸಹಳ್ಳಿಯಲ್ಲಿ 2 ಬಸ್ ಹಾಗೂ ದಮ್ಮನ ಕಟ್ಟೆಯಲ್ಲಿ 2 ಬಸ್ ಇದೆ. ಆದರೆ ಇದು ಕೊಡಗಿನ ವ್ಯಾಪ್ತಿಯಿಂದ ಹೊರತಾತದ್ದು ಎಂದು ಅವರು ತಿಳಿಸಿದರು. ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಖಾಸಗಿ ವ್ಯವಸ್ಥೆಯಲ್ಲಿ ಬರುವ ಜಂಗಲ್ ಲಾಡ್ಜ್ ರೆಸಾರ್ಟ್ನ (ಜೆ.ಎಲ್.ಆರ್.) ವ್ಯವಸ್ಥೆ ಪ್ರತ್ಯೇಕವಾಗಿದೆ.
ನಾಗರಹೊಳೆಯಲ್ಲಿ ಎರಡು ಡಾರ್ಮೆಟರಿ (24 ಜನ) ಹಾಗೂ ಎರಡು ಅತಿಥಿ ಗೃಹ(ತಲಾ ಎರಡು ಮಂದಿ)ವಿದ್ದು ಇದರ ಬುಕ್ಕಿಂಗ್ ವ್ಯವಸ್ಥೆಯೂ ಆನ್ಲೈನ್ ಮೂಲಕವೇ ಆಗಬೇಕಿದೆ.
ಪ್ರಸ್ತುತ ಬೇಸಿಗೆ ಆರಂಭವಾಗಿದ್ದು ಶೈಕ್ಷಣಿಕ ಪರೀಕ್ಷೆಗಳು ಎದುರಾಗುತ್ತಿರುವದರಿಂದ ಪ್ರವಾಸಿಗರ ಸಂಖ್ಯೆ ತುಸು ಕಡಿಮೆ ಇದೆ. ರಜಾ ದಿನಗಳಲ್ಲಿ ಇದು ಹೆಚ್ಚಾಗಲಿದೆ ಎಂದು ಪಾಲ್ ಆ್ಯಂಟನಿ ಅವರು ಹೇಳಿದರು.