ಮಡಿಕೇರಿ ಮಾ.6 : ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳು ಜಿಎಸ್ಟಿ ನೋಂದಣಿ ಮಾಡಿಕೊಳ್ಳುವಂತೆ ಇತ್ತೀಚೆಗೆ ಜಿಎಸ್ಟಿ ಕಚೇರಿಯಿಂದ ಇ-ಮೇಲ್, ಪತ್ರ ಮತ್ತು ವೈಯಕ್ತಿಕವಾಗಿ ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಹೋಂಸ್ಟೇ ಮಾಲೀಕರು ಗೊಂದಲಕ್ಕೀಡಾಗಿದ್ದು, ಮೈಸೂರಿನಲ್ಲಿರುವ ಜಿಎಸ್ಟಿ ಕಚೇರಿಯಲ್ಲಿ ಅಪರ ಆಯುಕ್ತರು ಹಾಗೂ ಗ್ರಾಮಾಂತರ ಜಿಲ್ಲಾ ಆಯುಕ್ತ ರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಜಿ.ಅನಂತಶಯನ ವಾರ್ಷಿಕ 20 ಲಕ್ಷ ರೂ.ಗಳಿಗಿಂತ ಕಡಿಮೆ ವ್ಯವಹಾರ ಮಾಡುವ ಹೋಂಸ್ಟೇಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.ಪ್ರಸಕ್ತ ನೋಂದಣಿ ಮಾಡಿದ ಹೋಂಸ್ಟೇಗಳ ಪಟ್ಟಿ ಮಾತ್ರ ಜಿಎಸ್ಟಿ ಕಚೇರಿಯಲ್ಲಿ ಲಭ್ಯವಿದ್ದು, ನೋಂದಣಿ ಯಾಗದ ಹೋಂಸ್ಟೇಗಳು ಹಾಗೂ ರೆಸಾರ್ಟ್ಗಳ ಬಗ್ಗೆ ಜಿಎಸ್ಟಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಗಳ ವ್ಯವಹಾರದ
(ಮೊದಲ ಪುಟದಿಂದ) ಆಧಾರದಲ್ಲಿ ಜಿಎಸ್ಟಿ ಅಧಿಕಾರಿಗಳು ಕ್ರಮಕೈಗೊಳ್ಳುವ ಮುನ್ಸೂಚನೆ ನೀಡಿರುವುದಾಗಿ ಅವರು ವಿವರಿಸಿದರು. ಕೊಡಗಿನಿಂದ ಕೇಂದ್ರ ಸರಕಾರಕ್ಕೆ ಅನಾಮಧೇಯ ಪತ್ರವೊಂದು ರವಾನೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಿಎಸ್ಟಿ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು, ಇದೀಗ ಕೊಡಗಿನ ಹೋಂಸ್ಟೇಗಳು ವಾರ್ಷಿಕ 5 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಮಾಡುತ್ತಿಲ್ಲ ಎಂಬುದನ್ನು ಇಲಾಖೆಯ ಗಮನಕ್ಕೆ ತರಲಾಗಿದೆ ಎಂದೂ ಅನಂತಶಯನ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದ ಹೋಂ ಸ್ಟೇಗಳಿಗೆ ಬೀಗಮುದ್ರೆ ಹಾಕುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವ ಹಿಸುತ್ತಿರುವ ಹೋಂಸ್ಟೇಗಳನ್ನು ತಾ.20ರ ಒಳಗಾಗಿ ನೋಂದಣಿ ಮಾಡಿ ಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಹೋಂಸ್ಟೇಗಳ ನೋಂದಣಿಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಗಡುವು ನೀಡಿದ್ದರೂ, ಹಲವಾರು ಹೋಂಸ್ಟೇಗಳು ಇನ್ನೂ ನೋಂದಣಿ ಮಾಡಿಕೊಂಡಿಲ್ಲ. ಇದರಿಂದಾಗಿ ಕೊಡಗಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಬೀಗ ಬೀಳಲಿದೆ
ಅದರಂತೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿಗಳು, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೋಂಸ್ಟೇಗಳನ್ನು ತಾ.20ರ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹೋಂಸ್ಟೇ ಮಾಲೀಕರ ಮನ ಒಲಿಸುವಂತೆ ಸೂಚಿಸಿದ್ದು, ಆ ನಂತರವೂ ನೋಂದಣಿ ಮಾಡದ ಹೋಂಸ್ಟೇಗಳಿಗೆ ಬೀಗ ಜಡಿಯುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇಗಳು ಈ ಅವಧಿಯ ಒಳಗಾಗಿ ನೋಂದಣಿ ಮಾಡಿ ಕೊಳ್ಳಬೇಕು ಎಂದು ಅನಂತಶಯನ ಹೇಳಿದರು.
ಸಂಘದ ಹಿರಿಯ ಸದಸ್ಯೆ ಮೋಂತಿ ಗಣೇಶ್ ಮಾತನಾಡಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಹೋಂಸ್ಟೇಗಳು ಪ್ರಮುಖ ಪಾತ್ರವಹಿಸುತ್ತಿವೆ. ಆದರೆ ಜಿಲ್ಲೆಯಲ್ಲಿ ನೋಂದಣಿಯಾಗದ ಹೋಂಸ್ಟೇಗಳು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಮೂಡಿಸುತ್ತಿರುವುದು ವಿಷಾದನೀಯ ಎಂದರು.
ಪ್ರಸಕ್ತ ಪ್ರವಾಸೋದ್ಯಮ ಇಲಾಖೆಯು ನೋಂದಣಿ ನಿಯಮಾವಳಿಗಳನ್ನು ಸಡಿಲಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೋಂಸ್ಟೇಗಳನ್ನು ನಡೆಸುತ್ತಿರುವ ಪ್ರತಿಯೊಬ್ಬರು ನೋಂದಣಿ ಮಾಡಿಸಿ ಕೊಳ್ಳುವ ಮೂಲಕ ಕೊಡಗಿನಲ್ಲಿ ಆರೋಗ್ಯಯುತ ಪ್ರವಾಸೋದ್ಯಮದ ಬೆಳವಣಿಗೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಹೆಸರು ಗೌಪ್ಯವಾಗಿರಲಿದೆ
ಜಿಲ್ಲೆಯ ವಿವಿಧೆಡೆಗಳಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂಸ್ಟೇಗಳ ಬಗ್ಗೆ ಸಾರ್ವಜನಿಕರು ಕೂಡಾ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹು ದಾಗಿದ್ದು, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡ ಲಾಗುತ್ತದೆ. ಅಥವಾ ಸಾರ್ವಜನಿಕರು ಸಂಘದ ಪದಾಧಿಕಾರಿಗಳಿಗೂ ಮಾಹಿತಿ ನೀಡಬಹುದಾಗಿದ್ದು, ಅಂತಹವರು ಮೊಬೈಲ್ ಸಂಖ್ಯೆ 9448048829 (ಬಿ.ಜಿ.ಅನಂತಶಯನ), 9243393234 (ಮೊಂತಿ ಗಣೇಶ್), 9448005642 (ನವೀನ್ಕುಶಾಲಪ್ಪ), 9945154144 (ಮೀನಾ ಕಾರ್ಯಪ್ಪ) ಅಥವಾ 9448167277 (ಮದನ್ ಸೋಮಣ್ಣ) ಅವರನ್ನು ಸಂಪರ್ಕಿಸಬಹುದೆಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಅಂಬೇಕಲ್ ನವೀನ್ ಕುಶಾಲಪ್ಪ ಹಾಗೂ ಮಾಜಿ ಅಧ್ಯಕ್ಷ ಮದನ್ ಸೋಮಣ್ಣ ಉಪಸ್ಥಿತರಿದ್ದರು.