ಮಡಿಕೇರಿ, ಮಾ. 6 : ಸ್ವಚ್ಛ ಕೊಡಗು ಎಂಬ ಪರಿಕಲ್ಪನೆ... ಕನಸ್ಸಿನೊಂದಿಗೆ ಕೊಡಗು ಜಿಲ್ಲೆಯನ್ನು ಸ್ವಚ್ಛಂದವಾಗಿರಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು, ಕ್ರಿಯಾಶೀಲ ಚಟುವಟಿಕೆಗಳು ಜಿಲ್ಲೆಯಲ್ಲಿ ವಿವಿಧ ಸಂಘ - ಸಂಸ್ಥೆಗಳ ಮೂಲಕ ಮಾತ್ರವಲ್ಲದೆ; ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ನಡೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ಮೂಲಕವೂ ಈ ಪ್ರಯತ್ನಗಳು ಹಾಗೂ ಇತರರ ಚಟುವಟಿಕೆಗಳಿಗೆ ಸಹಕಾರವೂ ಸಿಗುತ್ತಿರುವದು ಬಹುಶಃ ಜಿಲ್ಲೆಯ ಜನತೆಗೆ ಅರಿವಿದೆ.ಆದರೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಾಶಿ ರಾಶಿ ಕಸಗಳು ಪದೇ ಪದೇ ಗೋಚರಿಸುತ್ತಿರುವ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ರಸ್ತೆ ಬದಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ಮೂಲಕವೂ ಈ ಪ್ರಯತ್ನಗಳು ಹಾಗೂ ಇತರರ ಚಟುವಟಿಕೆಗಳಿಗೆ ಸಹಕಾರವೂ ಸಿಗುತ್ತಿರುವದು ಬಹುಶಃ ಜಿಲ್ಲೆಯ ಜನತೆಗೆ ಅರಿವಿದೆ.ಆದರೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಾಶಿ ರಾಶಿ ಕಸಗಳು ಪದೇ ಪದೇ ಗೋಚರಿಸುತ್ತಿರುವ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ರಸ್ತೆ ಬದಿಗಳಲ್ಲಿ ಕಸಗಳು ಕೊಡಗು ಜಿಲ್ಲೆ ಮಾತ್ರವಲ್ಲ; ರಾಜ್ಯದ ಇತರೆಡೆಗಳಿಗೂ ಒಂದು ರೀತಿಯ ದಂಧೆಯ ಮಾದರಿಯಲ್ಲಿ ಸುರಿಯಲಾಗುತ್ತಿದೆ ಎಂಬ ಆಘಾತಕಾರಿ ವಿಚಾರಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕೇರಳ ರಾಜ್ಯದ ಮೂಲಕ ಕೊಡಗು ಮಾರ್ಗವಾಗಿ ಕರ್ನಾಟಕ ರಾಜ್ಯದತ್ತ ಈ ರೀತಿಯಲ್ಲಿ ಅನುಪಯುಕ್ತ ಮರು ಬಳಕೆ ಮಾಡಲಾಗದ ಕಸಗಳು ನಿರಂತರವಾಗಿ ಭಾರೀ ಗಾತ್ರದ ಲಾರಿಗಳು, ಕಂಟೈನರ್‍ಗಳು, ಪಿಕ್-ಅಪ್‍ಗಳ ಮೂಲಕ ಬರುತ್ತಿವೆ ಎಂಬ ಮಾಹಿತಿ ‘ಶಕ್ತಿ’ಗೆ ಲಭ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಕೇವಲ ಕೇರಳ ರಾಜ್ಯ ವ್ಯಾಪ್ತಿಯ ಕಸಗಳು ಮಾತ್ರವಲ್ಲ ವಿದೇಶದಿಂದಲೂ ಈ ರೀತಿಯಲ್ಲಿ ಕಸ ಭಾರತಕ್ಕೆ ಬರುತ್ತಿದೆ ಎಂಬ ಅಂಶ ಕೇಳಿಬರತೊಡಗಿದ್ದು, ಇದು ನೈಜವಾಗಿದ್ದಲ್ಲಿ ಭಾರೀ ಗಂಭೀರತೆಯ ವಿಚಾರವಾಗಬೇಕಿದೆ.

ಬಂದರು ಮೂಲ

ಕೇರಳ ರಾಜ್ಯದಲ್ಲಿ ಮುಖ್ಯವಾಗಿ ಬಂದರು ಇರುವದು ಇದಕ್ಕೆ ಸಹಕಾರಿಯಾಗಿದೆ ಎನ್ನಲಾಗುತ್ತಿದೆ. ಹಡಗುಗಳ ಮೂಲಕ ಕಸದ ರಾಶಿ ಬರುತ್ತಿದ್ದು; ಈ ಬಂದರಿಗೆ ವಿವಿಧೆಡೆಗಳಿಂದ ಇತರ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ಆ ಸಾಮಾಗ್ರಿಗಳನ್ನು ಬಂದರಿನಲ್ಲಿ ಇಳಿಸಿ ಖಾಲಿಯಾಗಿ ಹಿಂತಿರುಗುವ ಸಂದರ್ಭವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಖಾಲಿಯಾಗಿ ಇಂತಹ ವಾಹನಗಳು ತಮ್ಮ ನಿಗದಿತ

(ಮೊದಲ ಪುಟದಿಂದ) ಪ್ರದೇಶಕ್ಕೆ ಹಿಂತಿರುಗುವ ಬದಲು ಚಾಲಕರು, ಕ್ಲೀನರ್‍ಗಳನ್ನು ಹಣದ ಆಮಿಷದ ಮೂಲಕ ಓಲೈಸಿಕೊಂಡು ಆ ವಾಹನಗಳಿಗೆ ಕಸವನ್ನು ತುಂಬಿ ಸಾಧ್ಯವಾಗುವ ಕಡೆಗಳಲ್ಲಿ ಹಾಕಿ ಹೋಗುವಂತಹ ರೀತಿಯ ದಂಧೆಯಾಗಿ ಇದು ನಡೆಯುತ್ತಿದೆಯಂತೆ. (!) ಇಂಗ್ಲೆಂಡ್, ಯುಕೆ, ಸ್ಪೇನ್, ಮದ್ಯಈಶಾನ್ಯ ರಾಷ್ಟ್ರಗಳಿಂದಲೂ ಈ ರೀತಿಯಾಗಿ ಕಸಗಳನ್ನು ತರಲಾಗಿದ್ದು; ಕೆಲ ಸಮಯದ ಹಿಂದೆ ಇಂತಹ ಹಡಗನ್ನು ವಾಪಾಸ್ಸು ಕಳುಹಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಜಿಲ್ಲೆಯ ಮಾಕುಟ್ಟ, ಕುಟ್ಟ, ಕರಿಕೆಯಂತಹ ಗಡಿಭಾಗಗಳ ಮೂಲಕ ಕೇರಳದಿಂದ ಕೊಡಗು - ಕರ್ನಾಟಕದತ್ತ ಬರುವ ವಾಹನಗಳ ಮೂಲಕ (ದಂಧೆಗೆ ಸಹಕರಿಸುತ್ತಿರುವ ) ಕಸಗಳು ರಾಜಾರೋಶವಾಗಿ ಕರ್ನಾಟಕದಾದ್ಯಂತ ಹರಡಲ್ಪಡುತ್ತಿದೆ ಎಂಬ ಆಘಾತಕಾರಿ ಅಂಶ ಪತ್ರಿಕೆಗೆ ಕೆಲವು ಖಚಿತ ಮೂಲಗಳಿಂದ ಕೇಳಿಬಂದಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಹಲವೆಡೆ ರಾಶಿ ರಾಶಿ ಕಸಗಳು ಪದೇ ಪದೇ ಕಂಡುಬರುತ್ತಿವೆ. ಮಾತ್ರವಲ್ಲ ನೆರೆಯ ಪಂಚವಳ್ಳಿ, ಪಿರಿಯಾಪಟ್ಟಣ, ಹುಣಸೂರು, ಗುಂಡ್ಲುಪೇಟೆ ಕಡೆಗಳಲ್ಲಿಯೂ ಕಸ ತುಂಬಿತುಳುಕುತ್ತಿರುವದು ಪ್ರಯಾಣಿಕರಿಗೆ ಕಂಡು ಬರುತ್ತಿದೆ. ಉತ್ತರ ಕರ್ನಾಟಕದ ಭಾಗಗಳಿಗೂ ಇವು ರವಾನಿಸಲ್ಪಡುತ್ತಿದೆ ಎಂದೂ ಹೇಳಲಾಗುತ್ತಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಮತ್ತಿತರ ಕಡೆಗಳಿಂದ ಕೇರಳದ ಬಂದರಿನತ್ತ ವಿವಿಧ ಸಾಮಗ್ರಿಗಳು ರಾಜ್ಯದ ಕೊಡಗಿನ ಮೂಲಕ ರವಾನೆಯಾಗುವದು ಬಹುಶಃ ಸಾಮಾನ್ಯವಾಗಿದೆ. ಈ ಸಾಮಗ್ರಿಗಳನ್ನು ಇಳಿಸಿದ ಬಳಿಕ ಈ ವಾಹನಗಳು ಇದೇ ಮಾರ್ಗದ ಮೂಲಕ ಹಿಂತೆರಳಬೇಕಾಗುತ್ತದೆ. ಇದರೊಂದಿಗೆ ತರಕಾರಿ, ಹಣ್ಣು - ಹಂಪಲು ಮತ್ತಿತರ ವಸ್ತುಗಳನ್ನು ಸಾಗಿಸುವ ಪಿಕ್‍ಅಪ್ , ಸಣ್ಣ ಲಾರಿಗಳ ಚಾಲಕರನ್ನೂ ಆಮಿಷವೊಡ್ಡಿ ಈ ರೀತಿಯ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ.

ಇವರು ಸಣ್ಣ - ಸಣ್ಣ ಮೂಟೆಗಳಲ್ಲಿ ನಿರುಪಯುಕ್ತ, ಕಸವಿಲೇವಾರಿ ಘಟಕಗಳಲ್ಲಿ ಪುನರ್ ಬಳಕೆ ಮಾಡಲು ಸಾಧ್ಯವಾಗದಂತಹ ಕಸಗಳನ್ನು ತಂದು ಅವಕಾಶ ಸಿಗುವಲ್ಲಿ ಬಿಸುಟು ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಕೇರಳದಲ್ಲಿ ಕಸವಿಲೇವಾರಿ ಕಟ್ಟುನಿಟ್ಟಾಗಿರುವದರಿಂದ ಖಾಸಗಿ ಹಾಗೂ ಪ್ರವಾಸಿ ವಾಹನಗಳಲ್ಲಿ ಬರುವ ಮಂದಿಯೂ ಸಣ್ಣ - ಸಣ್ಣ ಬ್ಯಾಗ್‍ಗಳಲ್ಲಿ ಕಸವನ್ನು ತಂದು ಹಾಕುವದೂ ಇದೆ. ಕೇರಳ ರಾಜ್ಯದಲ್ಲಿ ಹಲವೆಡೆ ಕಸವಿಲೇವಾರಿ ಘಟಕಗಳಿದ್ದರೂ ಕರ್ನಾಟಕದ ಕಸವಿಲೇವಾರಿ ಘಟಕಕ್ಕೆ ಏತಕ್ಕೆ ಕೆಲವು ಬಿಲ್‍ಗಳನ್ನು ಇಟ್ಟುಕೊಂಡು ಕಸವನ್ನು ಕೊಂಡೊಯ್ಯಲಾಗುತ್ತಿದೆ ಎಂಬ ಪ್ರಶ್ನೆಯೂ ಕಾಡುತ್ತದೆ.

ಕೇರಳ ಕಡೆಯಿಂದ ಕಸ ತುಂಬಿ ಆಗಮಿಸುತ್ತಿರುವ ಲಾರಿಗಳನ್ನು ಇದೀಗ ಜಿಲ್ಲೆಯ ಗಡಿಗಳಲ್ಲಿ ತಡೆದು ಮತ್ತೆ ವಾಪಾಸ್ಸು ಕಳುಹಿಸಲಾಗುತ್ತಿದೆ. ಈ ಲಾರಿಗಳು ಕೇರಳಕ್ಕೆ ಮತ್ತೆ ಹಿಂತಿರುವಾಗ ಅಲ್ಲಿ ಈ ವಾಹನಗಳ ಮೇಲೆ ಕ್ರಮ ಜರುಗಿಸಲಿರುವದರಿಂದ ಪ್ರಸ್ತುತ ಸ್ವಲ್ಪಮಟ್ಟಿಗೆ ಇದು ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ರಾತ್ರಿವೇಳೆಯಲ್ಲಿ ಮತ್ತೆ ಪ್ರಯತ್ನ ನಡೆಯುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಕ್ರಮ ವಹಿಸುವವರು ಯಾರು..?

ಈ ಅಕ್ರಮ ಕಸ ವಿಲೇವಾರಿಯನ್ನು ಯಾರು ನಿಯಂತ್ರಿಸಬೇಕು ಎಂಬದು ಈಗಿನ ಪ್ರಶ್ನೆಯಾಗಿದೆ. ಮುಖ್ಯವಾಗಿ ಕೊಡಗಿನ ಗಡಿ ಪ್ರದೇಶಗಳಲ್ಲಿ ಸೂಕ್ತ ತಪಾಸಣಾ ಗೇಟ್‍ಗಳೇ ಇಲ್ಲ. ಅರಣ್ಯ ಇಲಾಖೆಯ ತಪಾಸಣಾ ಗೇಟ್‍ಗಳಿದ್ದರೂ ಅರಣ್ಯ ಇಲಾಖೆಯವರು ಅರಣ್ಯ ಉತ್ಪನ್ನಗಳಿದ್ದರೆ ನಿಗಾವಹಿಸುವರೇ ವಿನಹಃ ಹೆಚ್ಚು ತಲೆಕೆಡಿಸಿಕೊಳ್ಳುವದಿಲ್ಲ ಹಾಗೂ ಕ್ರಮಜರುಗಿಸಲು ಅವಕಾಶವೂ ಇಲ್ಲ. ಪೊಲೀಸ್ ಇಲಾಖೆಯನ್ನು, ಆರ್‍ಟಿಓ ಅಧಿಕಾರಿಗಳನ್ನು ಈ ನಿಟ್ಟಿನಲ್ಲಿ ಚುರುಕುಗೊಳಿಸುವ ಮೂಲಕ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಾಗಿದೆ. ಜಿಲ್ಲೆಯಲ್ಲಿ ಸ್ವಚ್ಛ ಕೊಡಗು ಪರಿಕಲ್ಪನೆಯೊಂದಿಗೆ ಕಾರ್ಯಚಟುವಟಿಕೆ ನಡೆಸುತ್ತಿರುವ ಸಂಘ - ಸಂಸ್ಥೆಗಳು, ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಯವರೂ, ಸಾರ್ವಜನಿಕರೂ ಈ ಬಗ್ಗೆ ದನಿ ಎತ್ತುವದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಎಲ್ಲಾ ಪ್ರಯತ್ನಗಳು ‘ಗೋರ್ಕಲ್ಲ ಮೇಲೆ ಮಳೆ ಹುಯ್ದಂತೆ’ ಎಂಬ ನಾಣ್ನುಡಿಯಂತಾಗುವದರಲ್ಲಿ ಸಂಶಯವಿಲ್ಲ. ಜಿಲ್ಲೆಯಲ್ಲಿನ ಸುಂದರ ಪರಿಸರ ಪದೇ ಪದೇ ಕಲುಶಿತವಾಗಲಿರುವದೂ ನಿಸಂಶನೀಯ.