ಗೋಣಿಕೊಪ್ಪಲು, ಫೆ.28: ದ.ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಹಾಗೂ ಮಲ್ಲೂರು ಗ್ರಾಮಗಳಿಗೆ ಎಕ್ಸ್ಪ್ರೆಸ್ ವಿದ್ಯುತ್ ಪೂರೈಕೆಯಾಗಿದೆ. ಪೊನ್ನಂಪೇಟೆ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು; ಕಳೆದ ಎರಡು ವರ್ಷಗಳ ಪರಿಶ್ರಮದ ಫಲವಾಗಿ ಈ ವಿದ್ಯುತ್ ಗ್ರಾಮದ ಜನತೆಗೆ ಲಭ್ಯವಾಗಿವೆ.
ಬಾಳೆಲೆಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಹಾಗೂ ಗೋಣಿಕೊಪ್ಪ ಆರ್ಎಂಸಿಯ ಅಧ್ಯಕ್ಷ ಸುಜಾ ಪೂಣಚ್ಚ ಅವರ ಮುಂದಾಳತ್ವದಲ್ಲಿ ಆಗಮಿಸಿದ ಬಾಳೆಲೆ ಹೋಬಳಿ ಕೇಂದ್ರದ ಪ್ರಮುಖ ನಾಯಕರು ಪೊನ್ನಂಪೇಟೆಯ ವಿದ್ಯುತ್ ಸ್ಥಾವರದಲ್ಲಿ ಪೂಜೆ ಸಲ್ಲಿಸಿದ ನಂತರ ರಂಜನ್ ಚಂಗಪ್ಪ ಹಾಗೂ ಸಹಾಯಕ ಇಂಜಿನಿಯರ್ ಮನುಕುಮಾರ್ ಚಾಲನೆ ನೀಡಿದರು.
ಇದರಿಂದಾಗಿ ಬಾಳೆಲೆ ಹೋಬಳಿ ಕೇಂದ್ರಗಳಿಗೆ ಯಾವುದೇ ಅಡೆ ತಡೆ ಇಲ್ಲದಂತೆ ಈ ಭಾಗದ ರೈತರಿಗೆ, ನಾಗರಿಕರಿಗೆ ವಿದ್ಯುತ್ ಲಭಿಸಿದಂತಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ರಂಜನ್ ಚಂಗಪ್ಪ ಬಾಳೆಲೆ ಹೋಬಳಿಯ ಬಾಳೆಲೆ ಹಾಗೂ ಮಲ್ಲೂರು ಗ್ರಾಮಗಳಿಗೆ ಎಕ್ಸ್ಪ್ರೆಸ್ ವಿದ್ಯುತ್ ಲೈನ್ನಿಂದ ಬಹಳ ಪ್ರಯೋಜನವಾಗಿದೆ. ಈ ಭಾಗದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಕಡಿಮೆಯಾಗಲಿದೆ. ಗ್ರಾಮಸ್ಥರ ಎರಡು ವರ್ಷಗಳ ಒತ್ತಾಯಕ್ಕೆ ಇದೀಗ ಫಲ ಸಿಕ್ಕಿದೆ. ಬಾಳೆಲೆ ನಗರದಲ್ಲಿ ನೂತನ ಸಬ್ಸ್ಟೇಷನ್ ತೆರೆಯಲು ಗ್ರಾಮಸ್ಥರು ಇಲಾಖೆಗೆ ಸಹಕಾರ ನೀಡಿದ್ದಾರೆ. ಇನ್ನೂ ಹತ್ತು ತಿಂಗಳಿನಲ್ಲಿ ಇದರ ಕಾಮಗಾರಿ ಮುಗಿಯಲಿದೆ. ಇಲಾಖೆ ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಆರ್ಎಂಸಿ ಅಧ್ಯಕ್ಷ ಸುಜಾ ಪೂಣಚ್ಚ ಮಾತನಾಡಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಕೆಲಸ ನಿರ್ವಹಿಸುವ ಮೂಲಕ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಪೋಡಮಾಡ ಜ್ಯೋತಿ ನಾಚಪ್ಪ,ಚಕ್ಕೆರ ಸೂರ್ಯ, ಚಿಮ್ಮಂಗಡ ಕ್ರಿಷ್ಣ ಗಣಪತಿ, ಆದೇಂಗಡ ಪ್ರಕಾಶ್ ದೇವಯ್ಯ, ಅರಮಣಮಾಡ ಜೀವನ್, ಅಡ್ಡೇಂಗಡ ನವೀನ್, ತಾಣಚ್ಚಿರ ಲೇಹರ್ ಬಿದ್ದಪ್ಪ, ಕಾಡ್ಯಮಾಡ ಪ್ರವೀಣ್ ಪೂಣಚ್ಚ, ಆದೇಂಗಡ ವಾಸು ಬೆಳ್ಳಿಯಪ್ಪ, ಮಲ್ಚಿರ ವಿಠಲ, ಚೆಸ್ಕಾಂನ ಸಹಾಯಕ ಇಂಜಿನಿಯರ್ ಮನುಕುಮಾರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
-ಹೆಚ್.ಕೆ.ಜಗದೀಶ್