ಪೆರಾಜೆ, ಫೆ. 29: ಗ್ರಾಮ ಮಟ್ಟದಲ್ಲಿನ ಅಭಿವೃದ್ಧಿ ಕಾರ್ಯಗಳು ಬಿಜೆಪಿಯ ಸತತ ಗೆಲುವಿಗೆ ಕಾರಣವಾಗಿದೆ. ಇಂತಹ ಗೆಲುವು ಸಮರ್ಥ ಕಾರ್ಯಕರ್ತರ ಪಡೆ ಇದ್ದರೆ ಮಾತ್ರ ಸಾಧ್ಯ ಎಂದು ಸಂಸದ ಪ್ರತಾಪ್ಸಿಂಹ ಹೇಳಿದರು.ಪೆರಾಜೆ ಗ್ರಾ.ಪಂ.ನಲ್ಲಿ ಬಿಜೆಪಿ ಆಡಳಿತಕ್ಕೆ ಬಂದು 25ವರ್ಷ ಪೂರ್ಣಗೊಳ್ಳುತ್ತಿದ್ದು, ಇದರ ಅಂಗವಾಗಿ ಪೆರಾಜೆ ಬಿಜೆಪಿ ಸಮಿತಿ ವತಿಯಿಂದ ಶನಿವಾರ ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆದ ರಜತಸಂಭ್ರಮದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.(ಮೊದಲ ಪುಟದಿಂದ) ಕೇಂದ್ರ ಸರಕಾರ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದೆ. ಪ್ರಕೃತಿ ವಿಕೋಪದಡಿಯಲ್ಲಿ ಭೂಕುಸಿತದಿಂದ ಮಡಿಕೇರಿಯಿಂದ ಸಂಪಾಜೆವರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿ ದುರಸ್ತಿಗೆ ಈಗಾಗಲೇ ರೂ. 59 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದ ಅವರು ಮುಂದೆ ಕೊಡಗಿಗೂ ರೈಲು ವ್ಯವಸ್ಥೆಯಾಗಲಿದೆ ಎಂದು ಹೇಳಿದರು.
ಸಮಾವೇಶವನ್ನು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯ ಬಿಜೆಪಿಗೆ ಪೆರಾಜೆ ಗ್ರಾಮ ಆದರ್ಶ, ಇಂದು ರಜತ ಸಂಭ್ರಮ ಸಡಗರದ ಹಿಂದೆ ಹಿರಿಯರ ಹೋರಾಟದ ಶ್ರಮವಿದೆ ಎಂದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ; ಪಕ್ಷ ಸಂಘಟನೆ ಸಂಬಂಧ ಪೆರಾಜೆ, ಚೆಂಬು, ಸಂಪಾಜೆ ಗ್ರಾಮಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಇಡೀ ಕೊಡಗಿಗೆ ಮಾದರಿಯಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಅವರು ಮಾತನಾಡಿ, ಪ್ರತಿಯೊಬ್ಬ ಪ್ರಜೆಯ ಮನಸ್ಸು ಸಾಮಾಜಿಕ ಕಳಕಳಿಯತ್ತ ಪರಿವರ್ತನೆ ಯಾಗಬೇಕು. ಭಾರತ ಜಗದ್ಗುರು ಆಗುವ ನಿಟ್ಟಿನಲ್ಲಿ ನಮ್ಮ ನೈತಿಕ ಮೌಲ್ಯಗಳ ಮೂಲಕ ಕೈಜೋಡಿ ಸುವ ಅಗತ್ಯತೆ ಇದೆ ಎಂದರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಕೊಡಗು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಬಾಂಡ್ ಗಣಪತಿ, ಮಡಿಕೇರಿ ಗ್ರಾಮಾಂತರ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್, ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್, ಮಡಿಕೇರಿ ಎಪಿಎಂಸಿ ಉಪಾಧ್ಯಕ್ಷ ಅನಂತ ಎನ್.ಸಿ., ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ, ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಬಿಜೆಪಿ ಮುಖಂಡ ಸುಬ್ರಮಣ್ಯ ಉಪಾಧ್ಯಾಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಪೆರಾಜೆ ಬಿಜೆಪಿ ಮುಖಂಡ ಹಾಗೂ ಮಡಿಕೇರಿ ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಮನೋಜ್ ನಿಡ್ಯಮಲೆ ನಿರೂಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸಮಿತಿ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.