ಮಡಿಕೇರಿ, ಫೆ. 27: ನಗರದ ಸ್ಟುವರ್ಟ್‍ಹಿಲ್ ಬಳಿ ರೆಡ್‍ಕ್ರಾಸ್ ಸಂಸ್ಥೆಯ ನೂತನ ಕಟ್ಟಡಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಯಿತು. ಕರ್ನಾಟಕ ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ನಾಗಣ್ಣ ಅವರ ಉಪಸ್ಥಿತಿಯಲ್ಲಿ ಈ ಸಂಸ್ಥೆಯ ಕೊಡಗು ಘಟಕ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೂಮಿಪೂಜೆ ನೆರವೇರಿಸಿದರು.
ಅಂದಾಜು ರೂ. 1.30 ಕೋಟಿ ವೆಚ್ಚದಲ್ಲಿ ಸರಕಾರದಿಂದ ಮಂಜೂರಾಗಿ ರುವ 12.50 ಸೆಂಟ್ ನಿವೇಶನದಲ್ಲಿ ಈ ನೂತನ ಕಟ್ಟಡ ತಲೆಯೆತ್ತಲಿದ್ದು, ಸಾಧ್ಯವಿರುವಷ್ಟು ಕಾಮಗಾರಿಯನ್ನು ಜೂನ್ ಅಂತ್ಯ ದೊಳಗೆ ಮಳೆಗಾಲಕ್ಕೆ ಮುನ್ನ ಪೂರೈ ಸುವಂತೆ ನಿರ್ಮಿತಿ ಕೇಂದ್ರ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.ಕರ್ನಾಟಕ ‘ರೆಡ್‍ಕ್ರಾಸ್’ ಸಭಾಪತಿ ನಾಗಣ್ಣ ಅವರು ಈ ವೇಳೆ ಮಾತನಾಡಿ, ಶತಮಾನದ ಇತಿಹಾಸವಿರುವ ಸಂಸ್ಥೆಯ ಕೊಡಗು ಶಾಖೆಗೆ ಸ್ವಂತ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿರು ವುದು ಸಂತಸವೆಂದರಲ್ಲದೆ, ಜಿಲ್ಲಾ ಘಟಕದಲ್ಲಿ ರೂ. 50 ಲಕ್ಷ ಹಣವಿದ್ದು, ರಾಜ್ಯದಿಂದ ಮೊದಲ ಕಂತಿನಲ್ಲಿ ರೂ. 29 ಲಕ್ಷ ಒದಗಿಸುವುದಾಗಿ ಘೋಷಿಸಿದರು. ಅಲ್ಲದೆ ಕಾಮಗಾರಿ ಮುಕ್ತಾಯ ಹಂತದಲ್ಲಿ ಮತ್ತೆ ರೂ. 10 ಲಕ್ಷ ಕಲ್ಪಿಸುವ ಭರವಸೆ ನೀಡಿದರು.
ಕೊಡಗಿಗೆ ಅವಶ್ಯಕ: ವಿಶ್ವದೆಲ್ಲೆಡೆ ಮಾನವೀಯ ನೆಲೆಯಲ್ಲಿ ಕಷ್ಟಕಾಲಕ್ಕೆ ಸ್ಪಂದಿಸುತ್ತಿರುವ ರೆಡ್‍ಕ್ರಾಸ್ ಸಂಸ್ಥೆಯು ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಎದುರಾಗುತ್ತಿರುವ ಪ್ರಾಕೃತಿಕ ದುರಂತ ಹಿನ್ನೆಲೆ, ತೀರಾ ಅವಶ್ಯಕವೆಂದು ಅವರು ಈ ಸಂದರ್ಭ ನೆನಪಿಸಿ ಕೊಂಡರು.ವರ್ಷದ ಕಾಲಮಿತಿ: ಈ ವೇಳೆ ಮಾತನಾಡಿದ ಕೊಡಗು ಶಾಖೆ ಸಭಾಪತಿ ಬಿ.ಕೆ. ರವೀಂದ್ರ ರೈ, ಒಂದು ವರ್ಷದ ಕಾಲಮಿತಿಯಲ್ಲಿ ಕಟ್ಟಡ ಕಾಮಗಾರಿ ಮುಕ್ತಾಯ ಗೊಳ್ಳಲಿದ್ದು, ಕೊಡಗಿನ ಜನಪ್ರತಿನಿಧಿಗಳು, ದಾನಿಗಳು
(ಮೊದಲ ಪುಟದಿಂದ) ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸುವ ಅಭಿಲಾಷೆ ವ್ಯಕ್ತಪಡಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಅಶೋಕ ಕುಮಾರ್ ಶೆಟ್ಟಿ, ಮುರುಳಿಧರ್ ಅವರುಗಳು ಕೂಡ ಆದಷ್ಟು ಬೇಗ ಕೆಲಸ ಕೈಗೊಂಡು, ನೂತನ ಕಟ್ಟಡ ಜನಸೇವೆಗೆ ಬಳಕೆಯಾಗುವ ಇಂಗಿತ ಹೊರಗೆಡವಿದರು.
ಈ ಸಂದರ್ಭ ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಿಶಾಲ್, ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪೌರಾಯುಕ್ತ ಎಂ.ಎಲ್. ರಮೇಶ್, ರೆಡ್‍ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಿಲ್ ಎಚ್.ಟಿ., ಸ್ಯಾಮ್ ಜೊಸೇಫ್, ನಿರ್ದೇಶಕರು ಗಳಾದ ಪ್ರಸಾದ್ ಗೌಡ,
ಕೆ.ಡಿ. ದಯಾನಂದ್, ಎಂ. ಧನಂಜಯ್, ಹನೀಫ್, ಕಛೇರಿ ಕಾರ್ಯದರ್ಶಿ ಕೌಶಿ ಪೊನ್ನಮ್ಮ ಸೇರಿದಂತೆ ಹಲವರು
ಹಾಜರಿದ್ದರು.