ಕೂಡಿಗೆ, ಡಿ. 26: ಸೋಮವಾರಪೇಟೆ ತಾಲೂಕು ಹೆಚ್ಚು ಭತ್ತವನ್ನು ಬೆಳೆಯುವ ಪ್ರದೇಶವಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾರಂಗಿಯಿಂದ ಕೊಡಗಿನ ಗಡಿಭಾಗದ ಗ್ರಾಮ ಶಿರಂಗಾಲದವರೆಗೆ ವಿವಿಧ ಹೈಬ್ರಿಡ್ ತಳಿಯ ಭತ್ತವನ್ನು ಬೆಳೆಯಲಾಗುತ್ತಿದ್ದು, ಈ ಸಾಲಿನಲ್ಲಿ ಶೇ. 70 ರಷ್ಟು ಕೊಯ್ಲು ಮಾಡಲಾಗಿದ್ದರೂ ಭತ್ತದ ಖರೀದಿ ಕೇಂದ್ರವನ್ನು ತೆರೆದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ತಮ ಗೋದಾಮು ಇರುವುದರಿಂದ ಸರ್ಕಾರ ಭತ್ತದ ಖರೀದಿ ಕೇಂದ್ರವನ್ನು ತೆರೆದು, ಸೂಕ್ತ ಬೆಲೆಯನ್ನು ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ರೈತರಿಗೆ ಅನ್ಯಾಯವಾಗದಂತೆ ಭತ್ತ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಾಳಿ ತಪ್ಪಿಸಲು ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಈ ಸಾಲಿನಲ್ಲಿ ಭತ್ತದ ಖರೀದಿ ಕೇಂದ್ರವನ್ನು ಡಿಸೆಂಬರ್ ಮೊದಲ ವಾರದಿಂದಲೇ ಪ್ರಾರಂಭಿಸಿ ರೈತರಿಗೆ ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿ ಭತ್ತವನ್ನು ಖರೀದಿಸುವಂತೆ ಆಗ್ರಹಿಸಿದ್ದಾರೆ.
ಬಿತ್ತನೆ ಭತ್ತದ ಮಡಿಗಳನ್ನು ತಯಾರಿಸುವ ಸಂದರ್ಭ ಅತಿಯಾದ ಮಳೆಯಿಂದಾಗಿ ಗದ್ದೆಗಳು, ಭಿತ್ತನೆ ಮಡಿಗಳು ನೀರಿಗಾಹುತಿಯಾದವು. ಅಳಿದುಳಿದ ಭತ್ತದ ಮಡಿಗಳೊಂದಿಗೆ ಬೇರೆಡೆಗಳಲ್ಲಿ ಖರೀದಿ ಮಾಡಿ ಮಳೆಯ ನಡುವೆಯೇ ಭತ್ತವನ್ನು ನಾಟಿ ಮಾಡಿದ್ದರು. ಇದೀಗ ಅಕಾಲಿಕ ಮಳೆಯಿಂದಾಗಿ ಕೆಲವು ರೈತರು ಭತ್ತವನ್ನು ಕೋಯ್ಲು ಮಾಡದೆ ಗದ್ದೆಗಳಲ್ಲಿಯೇ ಉದುರುತ್ತಿವೆ. ಅಳಿದುಳಿದ ಭತ್ತವನ್ನು ರೈತರು ಕೋಯ್ಲು ಮಾಡಿ, ಮಾರಾಟ ಮಾಡಲು ಭತ್ತ ಖರೀದಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ, ಮೋಡ ಕವಿದ ವಾತಾವರಣದಿಂದ ರೈತರು ದಿಕ್ಕುತೋಚದೆ ಭತ್ತವನ್ನು ಕಣಗಳಲ್ಲಿಯೇ ಇಟ್ಟಿರುವುದು ಕಂಡುಬರುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.