ಡಿಸೆಂಬರ್ ತಿಂಗಳು ಎಂದಾಕ್ಷಣ ಕ್ರೈಸ್ತರೆಲ್ಲರಿಗೆ ಕಣ್ಮುಂದೆ ಸುಳಿದಾಡುವದು ಕ್ರಿಸ್ಮಸ್. ಎಂದರೆ ಕ್ರಿಸ್ತಜಯಂತಿ ಸಂಭ್ರಮದ ಹಬ್ಬಕ್ಕೆ ತಯಾರಿಯಾಗಿ, ಸಿಹಿ ಮತ್ತು ಖಾದ್ಯ ತಿಂಡಿಗಳನ್ನು ಸಿದ್ಧ ಮಾಡುವದು, ತಮ್ಮ ಮನೆಮಂದಿಗೆಲ್ಲಾ ಹೊಸ-ಹೊಸ ಉಡುಪುಗಳನ್ನು ಖರೀದಿಸುವ, ಗೃಹಾಲಂಕಾರ ಇತ್ಯಾದಿ, ಅಂತೆಯೇ ಮಕ್ಕಳು ಕ್ರಿಸ್ಮಸ್ ಗೋದಲಿಗಳ ರಚನೆ, ವಿದ್ಯುತ್ ಅಲಂಕಾರ, ಕ್ರಿಸ್ಮಸ್ ನಕ್ಷತ್ರಗಳನ್ನು ಪ್ರದರ್ಶಿಸಲು ಕಾತರದಿಂದಿರುತ್ತಾರೆ. ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ, ಸಂದೇಶ ವಿನಿಮಯ ಮಾಡಲು ಕಾತುರತೆಯಿಂದಿರುವ ಯುವಜನತೆ ಮನೆಯ ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು ಸಿದ್ಧತೆ ಮಾಡಿ ಸಂತೋಷದಿಂದ ಬರಮಾಡಿಕೊಳ್ಳುವ ಹಬ್ಬವೇ ಕ್ರಿಸ್ಮಸ್. ಹೀಗೆ ಇದು ಪ್ರತಿಮನೆಯ ಹಬ್ಬವಾದರೂ ಮನೆಯ ವಿವಾಹಿತ ಮಕ್ಕಳು, ನೌಕರಿ-ವಿದ್ಯಾಭ್ಯಾಸದ ದೃಷ್ಟಿಯಿಂದ ದೂರದಲ್ಲಿರುವ ಮಕ್ಕಳು, ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸುವ ಹಬ್ಬವೇ ಕ್ರಿಸ್ಮಸ್. ಇದೆಲ್ಲಾ ಉತ್ತಮವಾದ ಬೆಳವಣಿಗೆಯಾದರೂ ಪ್ರತಿಯೊಬ್ಬನೂ ಇದಕ್ಕಿಂತಲೂ ಮಿಗಿಲಾದ ಸಿದ್ಧತೆಯನ್ನು ಆಂತರಿಕವಾಗಿ ಮಾಡಿಕೊಂಡು ತಮ್ಮ ರಕ್ಷಕ ಯೇಸುಕ್ರಿಸ್ತರು ಹುಟ್ಟಿದ ದಿನವನ್ನು ಸಂತೋಷದಿಂದ ಸಂಭ್ರಮಿಸುವ ದಿನ. ಯೇಸು ಕ್ರಿಸ್ತರನ್ನು ಪವಿತ್ರಗ್ರಂಥವೇ ‘ಕ್ರಿಸ್ತರಾಜ’ಎಂದು ಪ್ರಮಾಣೀಕರಿಸಿ ಇಡೀ ಕ್ರೈಸ್ತ ಲೋಕವೇ ಕ್ರಿಸ್ತರಾಜ ಯೇಸುವನ್ನು ಆರಾಧಿಸುತ್ತಿದೆ.
ಸಾಮಾನ್ಯ ಲೌಕಿಕ ಅರಸನಿಗೂ ಕ್ರಿಸ್ತರಾಜ ಯೇಸುವಿಗೂ ಅಜಗಜಾಂತರ ವ್ಯತ್ಯಾಸವಿದೆ. ಅರಸತ್ವದ ಸುಖಭೋಗಗಳನ್ನು ಅನುಭವಿಸಲು ಅರಮನೆಯೇ ಇಲ್ಲದೆ ದನಗಳ ಗೋದಲಿಯಲ್ಲಿ ಜನಿಸಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಜೀವಿಸಿದ ಕ್ರಿಸ್ತಯೇಸು, ಪ್ರತಿಯೊಂದಕ್ಕೂ ಸೇವಕರನ್ನು ಹೊಂದಿರುವ ಅರಸರ ಬದಲಾಗಿ ತಾನೇ ಸೇವಕನಾಗಿ ವಿಧೇಯತೆಗೆ ಆದರ್ಶಪ್ರಾಯನಾದ ಕ್ರಿಸ್ತಯೇಸು, ಶಿರದಲ್ಲಿ ಅಧಿಕಾರದ ಕಿರೀಟವನ್ನು ಧರಿಸುವ ಬದಲು, ಅಪಮಾನದ ನೋವಿನ ಮುಳ್ಳಿನ ಕಿರೀಟವನ್ನು ಧರಿಸಿದ ಕ್ರಿಸ್ತಯೇಸು, ವೇಷಭೂಷಣಗಳನ್ನು ಧರಿಸಿ ಸಿಂಹಾಸನದ ಮೇಲೆ ಶೋಭಿಸುವ ಬದಲು ಧರಿಸಿದ ನಿಲುವಂಗಿಯನ್ನೇ ಕಳಚಿ ಹಾಕಿ ವಿವಸ್ತ್ರಗೊಳಿಸಿದಾಗ, ಖಿನ್ನರಾಗಿ ಶಿಲುಬೆಯ ಮೇಲೆ ತೂಗಾಡಿದ ಕ್ರಿಸ್ತಯೇಸು, ತಮ್ಮ ಪ್ರಾಂತ್ಯದ ಗಡಿಗಳನ್ನು ಭದ್ರಪಡಿಸಿಕೊಂಡು ಕಾವಲು ಪಡೆಯನ್ನು ಶಸ್ತ್ರಾಸ್ತ್ರಗಳೊಂದಿಗೆ ಸಬಲಪಡಿಸಿಕೊಳ್ಳುವದಕ್ಕಿಂತ ಪ್ರೀತಿಯೆಂಬ ಏಕೈಕ ಅಸ್ತ್ರದೊಂದಿಗೆ ಯಾವದೇ ಗಡಿಮಿತಿಯಿಲ್ಲದೇ ಇಡೀ ಮನುಕುಲಕ್ಕೆ ರಕ್ಷಕನೆನೆಸಿಕೊಂಡರು ಕ್ರಿಸ್ತಯೇಸು. ಯಾವದೇ ಯುದ್ಧಾಸ್ತ್ರಗಳನ್ನು ಬಳಸದೇ, ಯಾವದೇ ಶತ್ರುಪಡೆಯ ಸೈನಿಕರನ್ನು ನೆಲಕ್ಕುರುಳಿಸದೇ, ವೈರಿಗಳಿಲ್ಲದೆಯೇ ‘‘ಶತ್ರುಗಳನ್ನು ಪ್ರೀತಿಸಿ’’ ನೆರೆಹೊರೆಯವರನ್ನು ಪ್ರೀತಿಸಿ, ಪಾಪಿಗಳನ್ನು ಕ್ಷಮಿಸಿ ಎಂದು ಹೇಳುತ್ತಾ ‘ಪ್ರೀತಿ ಎಂಬ ಏಕೈಕ ಶಸ್ತ್ರಾಸ್ತ್ರವನ್ನು ಪ್ರಯೋಗಿಸಿ ಮನುಕುಲವನ್ನೇ ಗೆದ್ದ ವಿಶ್ವದೊಡೆಯ ಕ್ರಿಸ್ತರಾಜನ ಜನುಮದಿನ ಕ್ರಿಸ್ಮಸ್ ಆದ್ದರಿಂದಲೇ ಇದು ಕ್ರೈಸ್ತರಿಗೆ ಮಾತ್ರವಲ್ಲ, ಇತರ ಜನಾಂಗ ಬಾಂಧವ ರೊಂದಿಗೆ ಸಂಭ್ರಮದಿಂದ ಆಚರಿಸಲ್ಪಡುವ ಸಾರ್ವತ್ರಿಕ ಹಬ್ಬವಾಗಿದೆ.
ಯೇಸು ಜನಿಸಿದ್ದು, ಹೆರೋದರಸನ ಕಾಲದಲ್ಲಿ, ಜುದೇಯ ನಾಡಿನ ಬೆತ್ಲೆಹೇಂ ಊರಿನಲ್ಲಿ ಯೇಸುವಿನ ಜನನವನ್ನು ಸೂಚಿಸುವ ನಕ್ಷತ್ರವು ಪೂರ್ವದಿಕ್ಕಿನಲ್ಲಿ ಉದಯಿಸಿದ್ದನ್ನು ಕಂಡು ಕಂದನನ್ನು ಆರಾಧಿಸಲು ಕೆಲವು ಜ್ಯೋತಿಷಿಗಳು ಆ ದಿಕ್ಕಿನಲ್ಲಿ ಬಂದಿದ್ದರು. ಈ ವಿಚಾರವನ್ನು ಕೇಳಿಸಿಕೊಂಡ ಹೆರೋದರಸನು ತಳಮಳಗೊಂಡು ಗುಪ್ತವಾಗಿ ಆ ಜ್ಯೋತಿಷಿಗಳನ್ನು ಬರಮಾಡಿಕೊಂಡು ಯೇಸು ಜನಿಸಿದ ಸಮಯ ಹಾಗೂ ನಕ್ಷತ್ರ ಕಾಣಿಸಿ ಕೊಂಡ ಸ್ಪಷ್ಟಕಾಲವನ್ನು ತನಗೆ ತಿಳಿಸುವಂತೆ ವಿನಂತಿಸಿ, ತಾನೂ ಆ ಮಗುವನ್ನು ಆರಾದಿಸಬೇಕು ಎಂದು ತಿಳಿಸಿದನು. ಆದರೆ, ಅರಸನ ಯೋಜನೆಯೇ ಬೇರೆ ಆಗಿತ್ತು. ನಕ್ಷತ್ರಗಳು ತೋರಿದರೂ ದಾರಿಯಲ್ಲಿಯೇ ಜ್ಯೋತಿಷಿಗಳು ತೆರಳಿ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ನಕ್ಷತ್ರವು ಸ್ಥಬ್ದವಾಯಿತು. ಜ್ಯೋತಿಷಿಗಳು ಮಗುವನ್ನು ತಾಯಿ ಮರಿಯಾಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ನಮಿಸಿದರು. ಜನಿಸಲು ಎಲ್ಲೂ ಸಿಗದೇ ಕೊನೆಯಲ್ಲಿ ದನಗಳ ಗೋದಲಿಯೇ ಕಂದ ಯೇಸುವಿನ ಜನ್ಮಸ್ಥಳ ವಾಯಿತು. ಜ್ಯೋತಿಷಿಗಳು ತಮ್ಮ-ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ದೂಪ ಮತ್ತು ರಕ್ತ ಜೋಳ ಇವುಗಳನ್ನು ಮಗುವಿಗೆ ಕಾಣಿಕೆಯಾಗಿ ಸಮರ್ಪಿಸಿದರು. ಹೆರೋದರಸನ ಬಳಿಗೆ ಹಿಂತಿರುಗ ಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು. ಅಂದು ಕ್ರಿಸ್ತನ ಜನನ ತಂದಂತಹ ಶಾಂತಿ, ನೆಮ್ಮದಿಗಾಗಿ ಇಂದಿನ ಜಗತ್ತು ಹಂಬಲಿಸುತ್ತಿದೆ. ಆ ಕಾಲದಲ್ಲಿ ಯಾವದೇ ಸೌಕರ್ಯಗಳು, ತಂತ್ರಜ್ಞಾನ ಇರಲಿಲ್ಲ. ಆದರೆ, ಶಾಂತಿ ಸಮಾಧಾನ ಐಕ್ಯತೆ ಹಬ್ಬಿತ್ತು. ಇಂದು ತಂತ್ರಜ್ಞಾನ, ವಿದ್ಯುನ್ಮಾನಗಳ ಮಧ್ಯದಲ್ಲಿ ಶಾಂತಿ ಸಮಾಧಾನ ಮರೆಮಾಚಿದೆ. ಇಂದಿನ ಸಮಾಜದಲ್ಲಿ ಮಾನವನ ಬಾಳು ಹಿಂದೆಂದಿಗಿಂತಲೂ ಅಸಹನೀಯವಾಗಿದೆ. ಪ್ರಕೃತಿಯ ಮೇಲೆಸಗಿದ ಅತ್ಯಾಚಾರದ ಪರಿಣಾಮವಾಗಿ ಭೀಕರ ಪ್ರಕೃತಿ ವಿಕೋಪಗಳು ಬದುಕನ್ನು ದುಸ್ತರ ಗೊಳಿಸಿದೆ. ಆದರೆ, ನಿರಾಶರಾಗದೇ, ಪ್ರತಿಯೊಂದು ಹಬ್ಬವೂ ನಮ್ಮ ಜೀವಿತಕ್ಕೆ ಹೊಸತನವನ್ನು ನೀಡುತ್ತಿದೆ. ನಮ್ಮನ್ನೇ ನಾವು ಅಂತರ್ಗತವಾಗಿ ಅವಲೋಕಿಸಿ ಎಸಗಿದ ತಪ್ಪುಗಳಿಗೆ ಮನಮರುಗಿ ಸದಾಚಾರದ ಬೆಳಕಿನಲ್ಲಿ ನಡೆಯುವ ಪ್ರಯತ್ನ ನಮ್ಮದಾಗಲಿ.
-ಚಾಲ್ರ್ಸ್ ಡಿಸೋಜ, ಉಪನ್ಯಾಸಕರು,
ವೀರಾಜಪೇಟೆ.