ಮಡಿಕೇರಿ, ನ. 26: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಭಾರತ ಜ್ಞಾನ ವಿಜ್ಞಾನ ಸಮಿತಿ, (ಬಿಜಿವಿಎಸ್) ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯ ಹತ್ತು ಕ್ಲಸ್ಟರ್ಗಳಲ್ಲಿ ಡಿಸೆಂಬರ್ ತಿಂಗಳಲ್ಲಿ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಕ್ಲಸ್ಟರ್ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ “ಮಕ್ಕಳ ವಿಜ್ಞಾನ ಹಬ್ಬ’ ನಡೆಯಲಿದೆ.
“ಮಕ್ಕಳ ವಿಜ್ಞಾನ ಹಬ್ಬ’’ದಲ್ಲಿ ಕ್ಲಸ್ಟರ್ ಮಟ್ಟದಲ್ಲಿ 150 ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದಲ್ಲಿ 300 ವಿದ್ಯಾರ್ಥಿಗಳು ಹಾಗೂ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ವಿಜ್ಞಾನ ಹಬ್ಬದಲ್ಲಿ 500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಶಿಕ್ಷಣದ ಗುರಿ ಕೇವಲ ಅಕ್ಷರ ಕಲಿಕೆಯಲ್ಲ, ಬದಲಿಗೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವದಾಗಿದೆ. ಶಾಲಾ ಮಕ್ಕಳಲ್ಲಿರಬಹುದಾದ ಹಿಂಜರಿಕೆಯನ್ನು ಅಳಿಸಿ ಆತ್ಮವಿಶ್ವಾಸ ತುಂಬುವಂತಿರಬೇಕು. ಗುಂಪಿನಲ್ಲಿ ಕೆಲಸ ಮಾಡುವ ಮೂಲಕ ಪರಸ್ಪರ ಸಹಕಾರ, ಭಿನ್ನ ಸಂಪ್ರದಾಯ ಮತ್ತು ಯೋಚನೆಗಳನ್ನು ಗೌರವಿಸುವದು ಇನ್ನಿತರ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ. ಈ ಯೋಜನೆಗಳ ಆಧಾರದಲ್ಲಿ “ಮಕ್ಕಳ ವಿಜ್ಞಾನ ಹಬ್ಬ” ರಚನೆಯಾಗಿದೆ. ವಿಜ್ಞಾನ ಹಬ್ಬ ಮಾದರಿ ತಯಾರಿಕೆಯ ಚಟುವಟಿಕೆಯಲ್ಲ, ಈ ವಿಜ್ಞಾನ ಹಬ್ಬದಲ್ಲಿ ಯಾವದೇ ರೀತಿಯ ವಸ್ತುಗಳ ಪ್ರದರ್ಶನಗಳಿಲ್ಲ. ಸ್ಪರ್ಧೆಯಂತೂ ಇಲ್ಲವೇ ಇಲ್ಲ. ಪ್ರದರ್ಶನಗಳು, ಪ್ರವಚನಗಳು, ವಿಜ್ಞಾನ ಹಬ್ಬದಲ್ಲಿಲ್ಲ. ಮಕ್ಕಳೇ ಸ್ವತಃ ಮಾಡಿ ಆಡುತ್ತಾ, ಹಾಡುತ್ತಾ ಖುಷಿಪುಡುವ ಚಟುವಟಿಕೆಗಳ ಮೂಲಕ “ಮಕ್ಕಳ ವಿಜ್ಞಾನ ಹಬ್ಬ” ನಡೆಯಲಿದೆ. ಮಕ್ಕಳ ವಿಜ್ಞಾನ ಹಬ್ಬದಲ್ಲಿ “ವಿಜ್ಞಾನ” ಎಂಬದನ್ನು ಕಲಿಯುವ ವೈಜ್ಞಾನಿಕ ಕ್ರಮಗಳನ್ನು ಅನ್ವೇಷಿಸುವದು ಎಂಬ ವಿಶಾಲಾರ್ಥದಲ್ಲಿ ಬಳಸಲಾಗಿದೆ. ಮಕ್ಕಳ ಈ ಶಿಬಿರವು ಎಲ್ಲಾ ವಿಷಯಗಳನ್ನೊಳಗೊಂಡಿದೆ. ಭಾಷೆ, ಸಮಾಜ, ವಿಜ್ಞಾನ, ಕನ್ನಡ, ಗಣಿತ, ಕಲೆ, ಹಾಡುಗಳು, ನೃತ್ಯ, ನಾಟಕ, ಚಿತ್ರಕಲೆ, ಸಂವಾದ, ಕ್ಷೇತ್ರಭೇಟಿ, ಸಂದರ್ಶನ ಮತ್ತು ಈ ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಹಲವಾರು ವಿಭಾಗಗಳನ್ನು ಅಳವಡಿಸಲಾಗಿದೆ.
ಮಕ್ಕಳ ವಿಜ್ಞಾನ ಹಬ್ಬಕ್ಕೆ ಆಯ್ಕೆಯಾದ ಹತ್ತು ಕ್ಲಸ್ಟರ್ಗಳು: ಮಡಿಕೇರಿ ತಾಲೂಕು, ಪೆರಾಜೆ, ಚೇರಂಬಾಣೆ, ಚೆಟ್ಟಳ್ಳಿ, ಸೋಮವಾರ ಪೇಟೆ ತಾಲೂಕು, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ಶನಿವಾರಸಂತೆ, ವೀರಾಜಪೇಟೆ ತಾಲೂಕು:ಪಾಲಿಬೆಟ್ಟ, ಅಮ್ಮತ್ತಿ, ವೀರಾಜಪೇಟೆ ಹಾಗೂ ಮಕ್ಕಳ ವಿಜ್ಞಾನ ಹಬ್ಬವು ಮುಂದಿನ ತಿಂಗಳು ಜಿಲ್ಲೆಯಲ್ಲಿ ನಡೆಯಲಿದೆ.
ಈಗಾಗಲೇ ಎರಡು ದಿನಗಳ ಕಾಲ ಸಿ.ಆರ್.ಪಿ.ಗಳು ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ಯಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಯಶಸ್ವಿಗಾಗಿ ನಡೆದಿದೆ.
ಮಕ್ಕಳ ವಿಜ್ಞಾನ ಹಬ್ಬದಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಯುತ್ತದೆ. ಹಾಗೆ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಡಿ.ಡಿ.ಪಿ.ಐ. ಮಚ್ಚಾಡೋ ತಿಳಿಸಿದ್ದಾರೆ.
- ಕೆ.ಎಂ ಇಸ್ಮಾಯಿಲ್ ಕಂಡಕರೆ