ಮಡಿಕೇರಿ, ನ. 15: ಹಸಿವಾದವರಿಗೆ ಹೊಟ್ಟೆ ತುಂಬುವಲ್ಲಿ ಸಹಕಾರಿಯಾಗಬಹುದಾದ ಆಹಾರ ಪದಾರ್ಥಗಳನ್ನು ಯಾವದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ಈ ಮೂಲಕ ಭವಿಷ್ಯದಲ್ಲಿ ಆಹಾರ ಕ್ಷಾಮ ಉಂಟಾಗದಂತೆ ಪ್ರತೀಯೋರ್ವರೂ ಗಮನ ಹರಿಸಬೇಕಾಗಿದೆ ಎಂದು ಲಯನ್ಸ್ ಜಿಲ್ಲೆ 317ನ ಗವರ್ನರ್ ರೋನಾಲ್ಡ್ ಗೋಮ್ಸ್ ಕರೆ ನೀಡಿದ್ದಾರೆ.

ಮಡಿಕೇರಿ ಲಯನ್ಸ್ ಕ್ಲಬ್‍ಗೆ ಅದಿಕೃತ ಭೇಟಿ ನೀಡಿದ ಅವರು ಅನೇಕ ಕಾರ್ಯಕ್ರಮಗಳಲ್ಲಿ ಹೊಟ್ಟೆ ತುಂಬ ಆಹಾರ ತಿಂದ ಬಳಿಕವೂ ಹೆಚ್ಚಾದ ಆಹಾರವನ್ನು ವ್ಯರ್ಥ ಮಾಡುತ್ತೇವೆ. ಆಹಾರಕ್ಕೆ ಬೇಕಾದ ಪದಾರ್ಥಗಳು, ಉತ್ಪನ್ನಗಳನ್ನು ಬೆಳೆಸುವಲ್ಲಿ ಸಾವಿರಾರು ಜನರ ಶ್ರಮವಿರುತ್ತದೆ. ಈ ಶ್ರಮವನ್ನು ವ್ಯರ್ಥ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಲಯನ್ಸ್ ಜಿಲ್ಲೆಯಿಂದ ಅರಣ್ಯ ಇಲಾಖೆ ಸಹಯೋಗದೊಂದಿಗೆ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಹೇಳಿದ ರೋನಾಲ್ಡ್ ಗೋಮ್ಸ್, ಈ ಮೂಲಕ ಲಯನ್ಸ್ ಹಸಿರು ವರ್ಧನೆ ಸಂದೇಶ ಸಾರಲಿದೆ ಎಂದರು.

ಮಡಿಕೇರಿ ಲಯನ್ಸ್ ಕ್ಲಬ್ 1987 ರಿಂದಲೇ ಅಶ್ವಿನಿ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಪ್ರಾಯೋಜಕತ್ವ ನೀಡುತ್ತಾ ಬಂದದ್ದನ್ನು ರೋನಾಲ್ಡ್ ಗೋಮ್ಸ್ ಶ್ಲಾಘಿಸಿದರು.

ಲಯನ್ಸ್ ವಲಯಾಧ್ಯಕ್ಷ ಕೆ.ಕೆ. ದಾಮೋದರ್ ಮಾತನಾಡಿ, ಲಯನ್ಸ್ ಕ್ಲಬ್ ಗಳ ವತಿಯಿಂದ ಅಂಗಾಂಗ ದಾನದ ಯೋಜನೆ ಆಯೋಜಿತ ವಾಗಿದ್ದು ಪ್ರತೀ ಸದಸ್ಯರೂ ಅಂಗಾಂಗ ದಾನ ಮಾಡುವಂತೆ ಕರೆ ನೀಡಿದರಲ್ಲದೇ, ಜನವರಿ 19 ರಂದು ಮಡಿಕೇರಿಯಲ್ಲಿ ಲಯನ್ ಪ್ರಾಂತೀಯ ಸಮ್ಮೇಳನ ಆಯೋಜಿಸುತ್ತಿರುವದಾಗಿ ಹೇಳಿದರು.

ಮಡಿಕೇರಿ ಲಯನ್ಸ್ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಮಧುಕರ್, ಅನಿತಾ ಗೋಮ್ಸ್, ಲಯನ್ಸ್ ಪ್ರಮುಖರಾದ ಪಿ.ಪಿ.ಸೋಮಣ್ಣ, ಜೆ.ಸಿ.ಶೇಖರ್, ನವೀನ್ ಕಾರ್ಯಪ್ಪ ವೇದಿಕೆ ಯಲ್ಲಿದ್ದರು. ಎಂ.ಎ.ನಿರಂಜನ್ ಅತಿಥಿ ಪರಿಚಯ ಮಾಡಿದ ಕಾರ್ಯಕ್ರಮದಲ್ಲಿ ಸೌಮ್ಯ ನಿರಂಜನ್ ಪ್ರಾರ್ಥಿಸಿ, ಬಿ.ಸಿ. ನಂಜಪ್ಪ ವಂದಿಸಿದರು.

ನೇತ್ರಶಸ್ತ್ರಚಿಕಿತ್ಸೆಗೆ ನೆರವು : ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಆಯೋಜಿಸಿರುವ ನೇತ್ರ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಮಡಿಕೇರಿ ಲಯನ್ಸ್ ವತಿಯಿಂದ ರೂ. 20 ಸಾವಿರ ಆರ್ಥಿಕ ನೆರವನ್ನು ಆಸ್ಪತ್ರೆಯ ಕಾರ್ಯದರ್ಶಿ ತಮ್ಮಪ್ಪ ಹಾಗೂ ಆಡಳಿತಾಧಿಕಾರಿ ಶೆಣೈ ಅವರಿಗೆ ರೋನಾಲ್ಡ್ ಗೋಮ್ಸ್ ಹಸ್ತಾಂತರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್‍ಕುಮಾರ್, ಕಾರ್ಯದರ್ಶಿ ಕೆ. ಮಧುಕರ್, ವಲಯಾಧ್ಯಕ್ಷ ಕೆ.ಕೆ.ದಾಮೋದರ್, ನಿರ್ದೇಶಕರು, ಸದಸ್ಯರು ಹಾಜರಿದ್ದರು.