ಚೆಟ್ಟಳ್ಳಿ, ನ. 15: ಯೋಧನೊಬ್ಬ ಸೇವೆಯಿಂದ ನಿವೃತ್ತನಾಗಿ ತನ್ನ ತಾಯಿನಾಡಾದ ಕೊಡಗಿಗೆ ಬಂದು ಸಮಾಜಸೇವೆಯಲ್ಲಿ ತೊಡಗಿ ಹುತಾತ್ಮನಾಗುವ ಕಥೆ ಆಧಾರಿತ ಸಮಾಜಕ್ಕೆ ಹಲವು ಸಂದೇಶವನ್ನು ಸಾರುವ ಕೊಡಗ್‍ರ ಸಿಪಾಯಿ ಕೊಡವ ಸಿನಿಮಾ ಕೋಲ್ಕತದ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ.
ನಿವೃತ್ತ ಯೋಧ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸಿರುವ ಕೊಡಗ್‍ರ ಸಿಪಾಯಿ ಕೊಡವ ಚಲನಚಿತ್ರ ವಿವಿಧೆಡೆ 50ನೇ ದಿನದ ಪ್ರದರ್ಶಗೊಳ್ಳುತಿದ್ದಂತೆ ಕೋಲ್ಕತದ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನಕ್ಕೆ ಆಯ್ಕೆಗೊಂಡಿತ್ತು.
ಅಂತರ್ರಾಷ್ಟ್ರೀಯ ಮಟ್ಟದ 373 ಚಲನಚಿತ್ರಗಳಲ್ಲಿ ಕರ್ನಾಟಕದಿಂದ ಸುಮಾರು 73 ಚಲನಚಿತ್ರಗಳಲ್ಲಿ ಕನ್ನಡ, ಕೊಂಕಣಿ, ಬ್ಯಾರಿ, ತುಳು, ಲಂಬಾಣಿ, ಬಂಜಾರ ಭಾಷೆಗಳು ಸೇರಿ 17 ಚಲನಚಿತ್ರ ಆಯ್ಕೆಯಲ್ಲಿತ್ತು.
ಕ್‍ಟ್ಟತಪ್ರೀತಿ, ತೆಳ್‍ಂಗ್‍ನೀರ್, ಮೂಗ, ಕಣತರೆಕಾಂಬ್‍ಲೆ, ಬಾಕೆಮನೆ ಎಂಬ ಕೊಡವ ಸಿನೆಮಾಗಳು ಈ ಹಿಂದೆ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು, ತಾವು ನಿರ್ದೇಶಿಸಿರುವ ಆಶ್ರಯ ಧಾಮ, ಮಕ್ಕಳೇ ದೇವರು, ಸ್ಮಶಾನಮೌನ ಕನ್ನಡ ಚಲನಚಿತ್ರಗಳ ಜೊತೆಗೆ ಬಾಕೆಮನೆ ಹಾಗೂ ಕೊಡಗ್‍ರ ಸಿಪಾಯಿ ಚಲನಚಿತ್ರ ಅಂತರ್ರಾಷ್ಟ್ರೀಯ ಚಲನಚಿತ್ರಕ್ಕೆ ಆಯ್ಕೆಗೊಡಿರುವದು ಹೆಮ್ಮೆ ಎನಿಸಿದೆ ಎಂದು ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ಹೇಳುತ್ತಾರೆ.
-ಪುತ್ತರಿರ ಕರುಣ್ ಕಾಳಯ್ಯ