ಮಡಿಕೇರಿ, ನ.14: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಚೈಲ್ಡ್ ಲೈನ್ ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ತಾ.14 ರಿಂದ 20ರವರೆಗೆ ‘ಚೈಲ್ಡ್ ಲೈನ್ ಸೇ ದೋಸ್ತಿ’ ಸಪ್ತಾಹ ಕಾರ್ಯಕ್ರಮ ನಡೆಸಲಾಗುವದು ಎಂದು ಸಂಸ್ಥೆಯ ನಿರ್ದೇಶಕ ವಿ.ಎಸ್. ರಾಯ್ ಡೇವಿಡ್ ತಿಳಿಸಿದ್ದಾರೆ.

ತಾ.14 ರಂದು ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ತಾ.15ರಂದು ಐಗೂರು ಸರಕಾರಿ ಪ್ರೌಢಶಾಲೆಯಲ್ಲಿ ಭಿಕ್ಷಾಟನೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವದು ಮತ್ತು ಸಂವಾದ ನಡೆಸಲಾಗುವದು. ಅಲ್ಲದೆ, ಜಾಗೃತಿ ಜಾಥಾವು ನಡೆಯಲಿದೆ ಎಂದರು.

ತಾ.16 ರಂದು ಸಿದ್ದಾಪುರ ಆಟೋ ಚಾಲಕರ ಸಹಕಾರದೊಂದಿಗೆ ಸಿದ್ದಾಪುರದಲ್ಲಿ ಸಾಮಾಜಿಕ ಜಾಲ ತಾಣಗಳ ಸುರಕ್ಷತೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ‘ಮೌನ ಜಾಥಾ’ ತಾ.17 ರಂದು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಕುರಿತು ಸಮುದಾಯ ಭವನದ ಮಾಲೀಕರುಗಳಿಗೆ ಜಾಗೃತಿ ಮೂಡಿಸಲಾಗುವದು. ತಾ.18ರಂದು ಪಾಲಿಬೆಟ್ಟದ ಚೆಷೈರ್ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲೆ ಹಾಗೂ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ತಾ.19 ರಂದು ಕುಶಾಲನಗರದ ಪೊಲೀಸ್ ಠಾಣಾ ಆವರಣದಲ್ಲಿ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ದಂಡನೆ ಕುರಿತು ಜಾಗೃತಿ ಮೂಡಿಸಲಾಗುವದು. ತಾ.20ರಂದು ಆಲೂರು ಸಿದ್ದಾಪುರ ಗ್ರಾಮದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲಾಗುವದೆಂದು ರಾಯ್ ಡೇವಿಡ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಯೋಜಕ ನವೀನ್ ಕುಮಾರ್ ಮಾತನಾಡಿ, ಕೊಡಗು ಮಕ್ಕಳ ಸಹಾಯವಾಣಿ 1098 ಪ್ರಕರಣಗಳ ಪ್ರಕಾರ 2012 ಸೆಪ್ಟೆಂಬರ್‍ನಿಂದ 2019ರ ಸೆಪ್ಟೆಂಬರ್‍ವರೆಗೆ ಒಟ್ಟು 1518 ಪ್ರಕರಣಗಳು ದಾಖಲಾಗಿವೆ ಎಂದರು. 2019 ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ, ಬಾಲ್ಯ ವಿವಾಹ, ದೈಹಿಕ ದಂಡನೆ, ಬಾಲ ಕಾರ್ಮಿಕ, ಭಿಕ್ಷಾಟನೆ, ಭಾವನಾತ್ಮಕ ತೊಂದರೆ, ಕಾನೂನು ಸಂಘರ್ಷ, ನಾಪತ್ತೆಯಾದ ಮಕ್ಕಳು, ಶಿಕ್ಷಣದಿಂದ ವಂಚಿತರಾದ ಮಕ್ಕಳು ಸೇರಿದಂತೆ ಇನ್ನಿತರ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 184 ಪ್ರಕರಣಗಳು ದಾಖಲಾಗಿವೆ ಎಂದರು.

ಚೈಲ್ಡ್ ಲೈನ್ ಯೋಜನೆಯು ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆÉಯ ಅಗತ್ಯವಿರುವ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಉಚಿತ ಮತ್ತು ತುರ್ತು ಸೇವೆಯನ್ನು ನೀಡುತ್ತದೆ ಎಂದು ನವೀನ್ ಕುಮಾರ್ ತಿಳಿಸಿದರು. ಸಪ್ತಾಹದ ಭಿತ್ತಿ ಪತ್ರ ಬಿಡುಗಡೆ- ಇದೇ ಸಂದರ್ಭ ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಚೈಲ್ಡ್ ಲೈನ್ ಸಂಸ್ಥೆಯ ಪ್ರಮುಖರಾದ ಕುಮಾರಿ ಬಿ.ಕೆ., ಮಂಜುಳಾ ಎ.ಜೆ., ಶೋಭಾ ಲಕ್ಷ್ಮಿ ಹಾಗೂ ಪ್ರವೀಣ್‍ಕುಮಾರ್ ಉಪಸ್ಥಿತರಿದ್ದರು.