ಮಡಿಕೇರಿ, ನ. 15: ಸರಕು ತುಂಬಿದ್ದ ಪಿಕ್‍ಅಪ್ ವಾಹನ ಭಾರ ತಾಳಲಾರದೆ ಏರು ಪ್ರದೇಶದಲ್ಲಿ ಹಿಂದಕ್ಕೆ ಚಲಿಸಿ ಬೇರೆ ವಾಹನಗಳ ಮೇಲೆ ಮಗುಚಿಕೊಂಡ ಘಟನೆ ನಸುಗತ್ತಲೆಯಲ್ಲಿ ಇಲ್ಲಿನ ಗಣಪತಿ ಬೀದಿಯಲ್ಲಿ ಸಂಭವಿಸಿದೆ.
ಮಹದೇವಪೇಟೆಯ ಕಾವೇರಿ ಹಾರ್ಡ್‍ವೇರ್ಸ್‍ಗೆ ಗಾಜುಗಳನ್ನು ಸಾಗಿಸುತ್ತಿದ್ದ ಪಿಕ್‍ಅಪ್ (ಕೆ.ಎ. 09. ಸಿ.6529)ಗಣಪತಿ ಬೀದಿಯಿಂದ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏರುತ್ತಾ ಸಾಗುತ್ತಿರುವಾಗ ಭಾರ ತಾಳಲಾರದೆ ಒಮ್ಮೆಲೆ ಹಿಂದಕ್ಕೆ ಚಲಿಸಿ ರಸ್ತೆ ಬದಿಗೆ ಮಗುಚಿಕೊಂಡಿದೆ. ಹಿಂದೆ ಬರುತ್ತಿದ್ದ ಬೈಕ್ ( ಕೆ.ಎ. 45. ಇ. 9586) ಹಾಗೂ ಮಾರುತಿ ಆಲ್ಟೋ ( ಕೆ.ಎ. 12. ಪಿ. 7123) ಮೇಲೆ ಮಗುಚಿಕೊಂಡ ಪರಿಣಾಮ ಕಾರು ಹಾಗೂ ಬೈಕ್ ಜಖಂಗೊಂಡಿವೆ. ಪಿಕ್‍ಅಪ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.