ಮಡಿಕೇರಿ, ನ. 15: ಅವ್ಯವಸ್ಥೆಯ ಆಗರವಾಗಿರುವ ಮಡಿಕೇರಿ ನಗರಸಭೆಯನ್ನು ಬಡಿದೆಬ್ಬಿಸುವ ಸಲುವಾಗಿ ಕಳೆದ ತಿಂಗಳಷ್ಟೇ ಅಹೋರಾತ್ರಿ ಧರಣಿ ಮಾಡಿದ್ದ ಮಡಿಕೇರಿ ರಕ್ಷಣಾ ವೇದಿಕೆ ನಗರಸಭೆಯ ಅವ್ಯವಸ್ಥೆಯ ಖಂಡಿಸಿ ನಗರಸಭೆಯನ್ನು ಶವವಾಗಿಸಿ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿತು.
ಈ ಸಂದರ್ಭ ಮಾತನಾಡಿದ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಮಡಿಕೇರಿ ನಗರದ ಗುಂಡಿಬಿದ್ದ ರಸ್ತೆಗಳನ್ನು ಇನ್ನು ಹತ್ತು ದಿನದೊಳಗೆ ಮುಚ್ಚಿ ನಾಗರಿಕರಿಗೆ ನೆಮ್ಮದಿಯಾಗಿ ಸಂಚಾರ ಮಾಡಲು ಅನುವು ಮಾಡಿಕೊಡದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆಯ ಆಡಳಿತ Pಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲಾಗುವದು. ನಗರಸಭೆಯ ಆವರಣದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಬೀಡಾಡಿ ದನಗಳ ಹಾವಳಿ ಬಗ್ಗೆ ಈಗಾಗಲೇ ರಕ್ಷಣಾ ವೇದಿಕೆ ವೃತ್ತ ನಿರೀಕ್ಷರಿಗೆ ಮನವಿಪತ್ರ ನೀಡುವ ಮೂಲಕ ಗಮನಕ್ಕೆ ತರಲಾಗಿದೆ. ಇನ್ನೆರೆಡು ದಿನಗಳಲ್ಲಿ ನಗರದಾದ್ಯಂತ ಬೀಡು ಬಿಟ್ಟು ನಾಗರಿಕರಿಗೆ ಕಿರಿಕಿರಿ ಮಾಡುತ್ತಿರುವ ಬೀಡಾಡಿ ದನಗಳನ್ನು ಅವರವರ ವಾರಸುದಾರರು ಹಿಡಿದು ಕಟ್ಟದಿದ್ದಲ್ಲಿ ಮೈಸೂರು ಪಶುಸಂರಕ್ಷಣಾ ಘಟಕಕ್ಕೆ ಅವುಗಳನ್ನು ಸಾಗಿಸಲಾಗುವದು ಎಂದು ವೃತ್ತನಿರೀಕ್ಷಕರು ಹೇಳಿರುವದಾಗಿ ತಿಳಿಸಿದರು.
ಸ್ಟೋನ್ ಹಿಲ್ ಬಳಿ ಅವೈಜ್ಞಾನಿಕ ಕಸವಿಲೇವಾರಿಯ ಕುರಿತು ಮಾತನಾಡಿದ ಅವರು ರಸ್ತೆ ಗುಂಡಿ ಮುಚ್ಚಲು ನೀಡಿರುವ ಸಮಯಾವಕಾಶದಲ್ಲೇ ಕಸದ ಸಮಸ್ಯೆಗೂ ನಗರಸಭೆ ಸೂಕ್ತ ಕ್ರಮಕೈಗೊಂಡು ನಗರದ ನಾಗರಿಕರಿಗೆ ಮುಕ್ತಿದೊರಕಿಸಿ ಕೊಡಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಮುಂದಿನ ದಿನಗಳಲ್ಲಿ ರಕ್ಷಣಾ ವೇದಿಕೆ ಹೋರಾಡಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಮಹಿಳಾ ಅಧ್ಯಕ್ಷೆ ರಸ್ಮಿ, ಮುಖಂಡರುಗಳಾದ ಉಮೇಶ್ ಗೌಡ, ಪ್ರದೀಪ್ ಕರ್ಕಜೆ, ಉಮೇಶ್ ಗೌಡ, ಅಜಿತ್ ಕೊಟ್ಟಕೇರಿಯನ, ಭಗವತಿನಗರ ಕುಶ, ದಿನೇಶ್‍ನಾಯರ್, ಸತ್ಯ, ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷದ್ ಜನ್ನತ್ ಮತ್ತು ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.