ಮಡಿಕೇರಿ, ಅ. 26: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಕೊಡಗು ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಹಸಿರು ಪಡೆ ಪರಿಸರ ಕಾರ್ಯಕ್ರಮದಡಿ ಶಾಲೆಗಳ ಇಕೋ ಕ್ಲಬ್‍ಗಳ ಆಶ್ರಯದಲ್ಲಿ ಬೆಳಗ್ಗಿನ ಪ್ರಾರ್ಥನಾ ಸಮಯದಲ್ಲಿ ‘ಪರಿಸರ ಸ್ನೇಹಿ ಹಸಿರು ದೀಪಾವಳಿ’ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನವನ್ನು ನಡೆಸಲಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‍ಗಳು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ಶಾಲಾ ಶಿಕ್ಷಕರು ‘ಪಟಾಕಿಮುಕ್ತ ದೀಪಾವಳಿ ಆಚರಣೆ’ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಹಸಿರು ದೀಪಾವಳಿ ಆಚರಣೆಗೆ ಚಾಲನೆ ನೀಡಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಯನ್ನು ತ್ಯಜಿಸಿ ಹಸಿರು ದೀಪಾವಳಿ ಆಚರಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ಪರಿಸರ ಜಾಗೃತಿ ಆಂದೋಲನವನ್ನು ಕಳೆದ 7 ವರ್ಷಗಳಿಂದ ಆಂದೋಲನ ರೂಪದಲ್ಲಿ ನಡೆಸುತ್ತಾ ಬರಲಾಗಿದೆ ಎಂದು ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ಗುರುವಾರ ವಿವಿಧ ಶಾಲೆಗಳಲ್ಲಿ ಪಟಾಕಿ ಮುಕ್ತ ದೀಪಾವಳಿ ಆಚರಣೆ ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಿಸರ ಜಾಥಾ ನಡೆಸುವ ಮೂಲಕ ‘ಪಟಾಕಿ ಬಿಡೋಣ-ದೀಪ ಬೆಳಗಿಸೋೀಣ’, ‘ಪಟಾಕಿ ತ್ಯಜಿಸಿ -ಪರಿಸರ ಉಳಿಸಿ’, ‘ಹಣತೆ ಹಚ್ಚೋಣ ಬನ್ನಿ, ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ’ ಎಂಬಿತ್ಯಾದಿ ಪರಿಸರ ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.