ಗೋಣಿಕೊಪ್ಪ ವರದಿ, ಸೆ. 29: ಗುರುವಿನ ಸ್ಥಾನದಲ್ಲಿರುವ ಗುರುಕಾರೋಣನನ್ನು ಮರೆಯದಿರಿ ಎಂಬ ಸಂದೇಶವನ್ನು ದೀನಾ-ಗಾನಾ ಜೋಡಿ ನಿರ್ದೇಶನದ ‘ನೆಪ್ಪ್‍ರನಳ’ (ಅಂದಾಜು ನೆರಳು) ಎಂಬ ಕಿರು ಚಿತ್ರದ ಮೂಲಕ ಸಾರಲಾಯಿತು.

ಗೋಣಿಕೊಪ್ಪ ಪಾಪೆರಾ ಇನ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ನೆಪ್ಪ್‍ರನಳ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಚಿತ್ರದಲ್ಲಿ ಕೊಡವರು ಐನ್‍ಮನೆ ಮತ್ತು ಗುರು ಕಾರೋಣನನ್ನು ಮರೆಯುತ್ತಿರುವದರಿಂದ ಆಗುತ್ತಿರುವ ತೊಂದರೆಯ ಬಗ್ಗೆ ಮಾಹಿತಿ ನೀಡಲಾಯಿತು.

ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ವೈದ್ಯೆ ಡಾ. ಅಪ್ಪನೆರವಂಡ ಸೋನಿಯಾ ಮಂದಪ್ಪ, ಕೊಡವರ ಐನ್‍ಮನೆ ರಕ್ಷಣೆಗೆ ದೀಪವಿಟ್ಟು ಪೂಜಿಸುವ ಮಹಿಳೆಯರನ್ನು ಗೌರವಿಸಬೇಕಾಗಿದೆ ಎಂದರು.

ನಿವೃತ್ತ ಸೇನಾಧಿಕಾರಿ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಕೊಡಗಿನಲ್ಲಿ ಮಣ್ಣಿನ ರಕ್ಷಣೆಗೆ ಒತ್ತು ನೀಡುವ ಅವಶ್ಯಕತೆ ಇದೆ. ಎಲ್ಲಾರೂ ಇದಕ್ಕೆ ಕೈಜೋಡಿಸಬೇಕಾಗಿದೆ ಎಂದರು.

ಉದ್ಯಮಿ ಅರೆಯಡ ಪವಿನ್ ಪೊನ್ನಣ್ಣ, ಅಪ್ಪಚಟ್ಟಂಗಡ ಮೋಟಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ರಾಜೀವ್ ಬೋಪಯ್ಯ, ಸಂಭ್ರಮ ಮಹಿಳಾ ಸಂಘ ಅಧ್ಯಕ್ಷೆ ತಡಿಯಂಗಡ ಸೌಮ್ಯ, ನಿರ್ದೇಶಕ ಜೋಡಿಯಾದ ಕಳ್ಳಿಚಂಡ ದೀನಾ ಉತ್ತಪ್ಪ, ಕಲಾವಿದೆ ಪ್ರಭಾ ನಾಣಯ್ಯ ಉಪಸ್ಥಿತರಿದ್ದರು.

ಚಿತ್ರ ಕಲಾವಿದರಾದ ನೆರವಂಡ ಉಮೇಶ್, ಉಡುವೇರ ರಾಜಾ ಉತ್ತಪ್ಪ, ಮುಂಡಚಾಡೀರ ರಿನಿ ಭರತ್, ನಂದಿನೆರವಂಡ ಶರತ್ ಮೇದಪ್ಪ, ಕೋಡಿಯಂಡ ಕೌಶಿಕ್ ಚೆಂಗಪ್ಪ ಇದ್ದರು. ಶ್ಯಾಮಲಾ ತಂಡದಿಂದ ಕೊಡವ ನೃತ್ಯ, ಮಕ್ಕಳಿಂದ ಕೊಡವ ಗೀತೆ ಮೂಡಿ ಬಂತು. -ಸುದ್ದಿಮನೆ