ಮಡಿಕೇರಿ, ಸೆ. 22: ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಿಸಬೇಕು ಎಂದು ಆಗ್ರಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಧಾರ್ಮಿಕ ನಂಬಿಕೆಗೆ ಪೂರಕವಾದ ಗೋವÀಧೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಿಸಬೇಕು. ಆ ಮೂಲಕ ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲೊಡ್ಡುತ್ತಿರುವ ನುಸುಳುಕೋರರನ್ನು ದೇಶದಿಂದ ಹೊರದಬ್ಬಬೇಕು ಎಂದು ಒತ್ತಾಯಿಸಿದರು. ರೋಹಿಂಗ್ಯಾ, ಬಾಂಗ್ಲಾದೇಶಿ ಮತ್ತಿತರ ವಿದೇಶಿ ನುಸುಳುಕೋರರು ನೆರೆ ಪೀಡಿತರ ಹೆಸರಿನಲ್ಲಿ ಪುನರ್ವಸತಿ ಮತ್ತು ಇತರ ಸವಲತ್ತುಗಳನ್ನು ಪಡೆಯುವ ಮೂಲಕ ಕೊಡಗಿನಲ್ಲೇ ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ. ಇದು ದೇಶದ ಸ್ಥಿರತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲಾಗಲಿದೆ ಎಂದು ಅವರು ಹೇಳಿದರು.
ಕೊಡವರು ಗೋವನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಿದ್ದು, ಕೊಡವರ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಕೊಡಗಿನ ಕಮಿಷನರ್ ಆಗಿದ್ದ ಕರ್ನಲ್ ಫ್ರೇಸರ್ 1835ರಲ್ಲೇ ಗೋರಕ್ಷಣೆ ಕಾಯ್ದೆಯನ್ನು ಕೊಡಗಿನಲ್ಲಿ ಜಾರಿಗೆ ತಂದಿದ್ದರು. ಆದರೆ ಪ್ರಸಕ್ತ ಕೊಡವರ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಗೋವಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದ್ದು, ಸರಕಾರ ಕೂಡಲೇ ಗೋರಕ್ಷಣೆ ಮತ್ತು ಗೋವಧೆ ನಿಷೇಧ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದರು.
ಸತ್ಯಾಗ್ರಹ: ಕೊಡವ ಬುಡಕಟ್ಟು ಜನಾಂಗದ ಪ್ರಮುಖ ಮೂರು ಹಕ್ಕೊತ್ತಾಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು ಎಂದು ಒತ್ತಾಯಿಸುವ ಸಲುವಾಗಿ ತಾ. 23 ರಂದು ಸಿಎನ್‍ಸಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವದು. ಕೊಡವರಿಗೆ ಕೋವಿ ಹೊಂದುವ ವಿಶೇಷ ಹಕ್ಕನ್ನು ಇನ್ನಿಲ್ಲದಂತೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಹಕ್ಕನ್ನು ಅಬಾಧಿತವಾಗಿ ಶಾಶ್ವತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಇಂಡಿಯನ್ ಆಮ್ರ್ಸ್ ಆಕ್ಟ್‍ಗೆ ತಿದ್ದುಪಡಿಯನ್ನು ಕೇಂದ್ರ ಸರಕಾರ ಮಾಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖ ಚೆಂಬಾಂಡ ಜನತ್ ಉಪಸ್ಥಿತರಿದ್ದರು.