ಮಡಿಕೇರಿ, ಸೆ. 22: ಜಮಾಅತೆ ಇಸ್ಲಾಮೀ ಹಿಂದ್‍ನ ಅಂಗ ಸಂಸ್ಥೆ ಯಾಗಿರುವ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಮೂಲಕ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕೊಡಗಿನ 859 ಕುಟುಂಬಗಳನ್ನು ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗೆ ಇದುವರೆಗೆ ಸುಮಾರು 19ಲಕ್ಷರೂ.ಗಳನ್ನು ವ್ಯಯಿಸಲಾಗಿದೆ ಎಂದು ಕೊಡಗು ರಿಲೀಫ್ ಸೆಲ್‍ನ ಕಾರ್ಯದರ್ಶಿ ಟಿ.ಎ.ಬಶೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಂಪೂರ್ಣ ಮನೆ ಕಳೆದು ಕೊಂಡವರಿಗೆ ನಿರ್ಮಿಸಲಾಗಿರುವ 8 ಮನೆಗಳನ್ನು ಅ. 2 ರಂದು ಮಡಿಕೇರಿ ಯಲ್ಲಿ ಉದ್ಘಾಟಿಸಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಗೆ ಒಳಗಾಗಿದ್ದ 45 ಕುಟುಂಬಗಳಿಗೆ ರೂ. 4.50 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲಾಗಿದೆ. ಸುಮಾರು ರೂ. 5 ಲಕ್ಷ ಮೌಲ್ಯದ ಆಹಾರದ ಕಿಟ್‍ಗಳನ್ನು, ಸುಮಾರು ರೂ. 7 ಲಕ್ಷ ಮೌಲ್ಯದ ಹಾಸಿಗೆ, ಕಂಬಳಿ, ವಸ್ತ್ರಗಳು, ಪಾದರಕ್ಷೆಗಳು, ಅಡುಗೆ ಸಾಮಗ್ರಿಗಳನ್ನು ವಿತರಿಸ ಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಹದಲ್ಲಿ ಕೆಲಸದ ಉಪಕರಣಗಳನ್ನು ಕಳೆದುಕೊಂಡಿದ್ದ ಸಂತ್ರಸ್ತ ಪ್ರಕಾಶ್ ಎಂಬವರಿಗೆ ರೂ. 2500 ಮೌಲ್ಯದ ಯಂತ್ರೋಪಕರಣ ಗಳನ್ನು, ಜೀವನೋಪಾಯಕ್ಕಾಗಿ ಶರೀಫ್ ಎಂಬವರು ಹೊಂದಿದ್ದ ಅಂಗಡಿಗೆ ಪ್ರವಾಹದಿಂದ ಹಾನಿಯುಂಟಾದ ಹಿನ್ನೆಲೆ ಅವರಿಗೆ 50 ಸಾವಿರ ರೂ. ನೆರವನ್ನು ನೀಡಲಾಗಿದೆ. ಕರಡಿಗೋಡು ಗ್ರಾಮದ ವೃದ್ಧ ಅಂಗವಿಕಲ ಸಂತ್ರಸ್ತರೊಬ್ಬರಿಗೆ 5 ಸಾವಿರ ರೂ. ಮೌಲ್ಯದ ಗಾಲಿ ಖುರ್ಚಿಯನ್ನು ವಿತರಿಸಲಾಗಿದೆ, ಮೂರು ಮಂದಿ ಸಂತಸ್ತರಿಗೆ ಚಿಕಿತ್ಸೆಗಾಗಿ ರೂ. 10 ಸಾವಿರ ನಗದನ್ನು ನೀಡಿರುವದಾಗಿ ಬಶೀರ್ ತಿಳಿಸಿದರು.
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ 45 ಮಂದಿ ವಿದ್ಯಾರ್ಥಿಗಳ ಶಿಕ್ಷಣ, ಪಠ್ಯಪುಸ್ತಕ ಮುಂತಾದವುಗಳಿಗಾಗಿ ಸಂಸ್ಥೆ 68 ಸಾವಿರ ರೂ.ಗಳನ್ನು ವಿನಿಯೋಗಿಸಿದೆ. ಸುಮಾರು 60 ಮಂದಿಗೆ ವಿದ್ಯಾರ್ಥಿ ವೇತನ, ಆಧಾರ್ ತಿದ್ದುಪಡಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಿಕೊಡಲು ಶ್ರಮಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‍ನ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರೆಹ್ಮಾನ್ ಪಿ.ಕೆ., ಹೆಚ್‍ಆರೆಸ್ ಸದಸ್ಯರಗಳಾದ ಎನ್.ಎ. ಅಬ್ದುಲ್ ಗಫೂರ್, ಶಫೀಕ್ ಹಾಗೂ ಕೆ.ಎ. ಇಬ್ರಾಹಿಂ ಉಪಸ್ಥಿತರಿದ್ದರು.