ಸುಂಟಿಕೊಪ್ಪ, ಜು.27: ಒಂದೆಡೆ ಕಳೆದ ವರ್ಷ ತೀವ್ರ ಮಳೆಯಿಂದ ಮನೆ ಮಠ ಕಳೆದುಕೊಂಡವರಿಗೆ ಸರಕಾರದಿಂದ ನಿರ್ಮಿಸುತ್ತಿರುವ ಮನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದರೆ ಸಂತ್ರಸ್ತರಾದವರಿಗೆ ನೀಡಿದ ಮನೆಗೆ ಮೂಲಭೂತ ಸೌಕರ್ಯವಿಲ್ಲದೆ ಕಂಗಲಾದ ನಿರಾಶ್ರಿತರ ಬದುಕು ಮೂರಾಬಟ್ಟೆಯಾಗಿದೆ. ಮತ್ತೊಂದಡೆ ಕಾಮಗಾರಿ ಗುತ್ತಿಗೆ ಪಡೆದವರ ಬೇಕಾಬಿಟ್ಟಿ ಕೆಲಸ ನಿರ್ವಹಣೆಯಿಂದ ರಸ್ತೆ ಹಾಳಗಿದ್ದು ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿಯ ಜಂಬೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಕಳೆದ ವರ್ಷ ಅತಿವೃಷ್ಠಿಯಿಂದ ಸಂತ್ರಸ್ತರಾದವರಿಗೆ ಜಿಲ್ಲಾಡಳಿತದಿಂದ ನಿರ್ಮಿಸುತ್ತಿರುವ ವಸತಿ ಕಾಮಗಾರಿಯ ಕರ್ಮಕಾಂಡದ ನಿದರ್ಶನ ಇದಾಗಿದೆ.
2018ರ ಆಗಸ್ಟ್ 16,17,18 ರಂದು ಕೊಡಗು ಜಿಲ್ಲೆಯ ಜನತೆ ಜಲಪ್ರಳಯ ಭೂಕುಸಿತದಿಂದ ಮನೆ, ಮಠ, ತೋಟ ಗದ್ದೆ ಜಾನುವಾರುಗಳನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಬೀದಿಗೆ ಬಂದಿದ್ದರು; ಜಿಲ್ಲಾಡಳಿತ ತೆರೆದ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.
ಕೇಂದ್ರ, ರಾಜ್ಯ ಸರಕಾರ, ಖಾಸಗಿ ಕಂಪನಿಗಳ ದಾನಿಗಳ ನೆರವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದಿತ್ತು. ಹಾಗೆಯೇ ಮಾದಾಪುರ ಜಂಬೂರು, ಮಡಿಕೇರಿಯ ಕರ್ಣಂಗೇರಿ ಮದೆನಾಡುವಿನಲ್ಲಿ ಸರಕಾರಿ ಜಾಗ ಗುರುತಿಸಿ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಸರಕಾರ ಮುಂದಾಗಿತ್ತು. ಮಾದಾಪುರದ ಜಂಬೂರಿನಲ್ಲಿ 318 ಮನೆ ನಿರ್ಮಿಸುವ ಗುರಿ ಹೊಂದಿದ್ದು, ಹುಬ್ಬಳ್ಳಿಯ ಗುತ್ತಿಗೆ ಪಡೆದವರ ನಿಧಾನಗತಿಯ ಕಾಮಗಾರಿಯಿಂದ ಇನ್ನು 90 ಮನೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ 31 ಮಂದಿ ನಿರಾಶ್ರಿತರಿಗೆ ಪ್ರಥಮ ಹಂತದಲ್ಲಿ ಮನೆಯ ಹಂಚಿಕೆಯಾಗಿತ್ತು. ಅವರುಗಳು ಸಹ ಶೌಚಾಲಯ ನೀರಿನ ಸೌಲಭ್ಯವಿಲ್ಲದೆ ಪರಿತಪಿಸುವಂತಾಗಿದೆ. ಮತ್ತೊಂದೆಡೆ ಮನೆ ನಿರ್ಮಿಸುವ ಧಾವಂತದಲ್ಲಿ ಜಂಬೂರು ಗ್ರಾಮದ ರಸ್ತೆಗಳು ಗುಂಡಿ ಬಿದ್ದು ವಾಹನಗಳು, ಶಾಲಾ ಮಕ್ಕಳು ಸಂಚರಿಸದಂತಾಗಿದೆ ವಸತಿ ಸಮುಚ್ಚಯದ ವಿಭಾಗದ ರಸ್ತೆ ತೀರಾ ಹಾಳಾಗಿದ್ದು, ಮಳೆಯಲ್ಲಿ ಆನೇಕ ವಾಹನಗಳು ಗುಂಡಿಗೆ ಬಿದ್ದಿವೆ. ಆಟೋ ರಿಕ್ಷಾ ಸೇರಿದಂತೆ ಇತರೆ ವಾಹನ ಚಾಲಕರು ಹರ ಸಾಹಸ ಪಡುತ್ತಿರುವದು ನಿತ್ಯ ಕಾಣಬಹುದಾಗಿದೆ.
ಗ್ರಾಮಸ್ಥರಾದ ಪಿ.ಎಸ್. ಸುರೇಶ್ ಬೋಪಯ್ಯ ಅವರು ಸ್ನೇಹಿತರೊಂದಿಗೆ ಸೇರಿಕೊಂಡು ಗುಂಡಿಬಿದ್ದ ರಸ್ತೆಗೆ ಮಣ್ಣು ಹಾಕಿ ಮುಚ್ಚಿ ಸದ್ಯ ವಾಹನ ಚಾಲನೆಗೆ ಅನುವು ಮಾಡಿಕೊಡಲು ಪ್ರಯತ್ನಿಸಿದ್ದಾರೆ.