ಕೂಡಿಗೆ, ಜು. 27: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳ ಪಡುವ ಹುಣಸೆಪಾರೆಯಲ್ಲಿ ಇರುವ 22 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹುಣಸೆಪಾರೆಯಲ್ಲಿಯೇ ಪಡಿತರ ಚೀಟಿ ಮತ್ತು ಆಧಾರ್‍ಕಾರ್ಡ್ ಅನ್ನು ಒದಗಿಸಬೇಕು ಎಂದು ಹುಣಸೆಪಾರೆ ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

ನಮಗೆ ಯಾವದೇ ಸೌಲಭ್ಯ ಪಡೆಯಲು ಆಧಾರ್‍ಕಾರ್ಡ್ ಮತ್ತು ಪಡಿತರ ಚೀಟಿಯು ಅಗತ್ಯವಿರುವದರಿಂದ ಗ್ರಾಮ ಪಂಚಾಯ್ತಿಯು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‍ನ್ನು ಒದಗಿಸಬೇಕು ಎಂದು ಹುಣಸೆಪಾರೆ ಹಾಡಿಯ ಜೇನುಕುರುಬ ನಿವಾಸಿಗಳಾದ ಸುಬ್ಬಮ್ಮ, ದೇವಮ್ಮ, ನಂಜ, ಸೋಮಶೇಖರ್ ಸೇರಿದಂತೆ ಸುಮಾರು 25 ಕ್ಕು ಹೆಚ್ಚು ಮಂದಿ ಶುಕ್ರವಾರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

ಈ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯ್ತಿ ವತಿಯಿಂದ ಆಧಾರ್‍ಕಾರ್ಡ್ ಸಂಖ್ಯೆ ನೊಂದಣಿಯಾಗಿರುವವರಿಗೆ ಪಡಿತರ ಚೀಟಿಯನ್ನು ವಿತರಿಸಲಾಗುತಿದ್ದು, ಆಧಾರ್, ಪಡಿತರ ಚೀಟಿ ಹೊಂದಿಲ್ಲದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಪಡಿತರ ಚೀಟಿ, ಆಧಾರ್ ಕಾರ್ಡ್ ಅನ್ನು ಪಡೆಯುವಂತೆ ಸೂಚನೆ ನೀಡಲಾಗುತ್ತಿದೆ ಎಂದರು.