ಸೋಮವಾರಪೇಟೆ, ಜು. 21: ಒಂದು ಕಿಲೋ ಮೀಟರ್ಗೆ ಒಂದು ಕೋಟಿ ಯಂತೆ ಖರ್ಚು ಮಾಡಿ ಕೈಗೊಳ್ಳಲಾದ ರಾಜ್ಯ ಹೆದ್ದಾರಿ ಕಾಮಗಾರಿ ವರ್ಷವಾಗುತ್ತಲೇ ಕಿತ್ತು ಬರುತ್ತಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸೋಮ ವಾರಪೇಟೆಯ ಕೋವರ್ ಕೊಲ್ಲಿಯಿಂದ ಕೂಡಿಗೆ ಯವರೆಗಿನ 17 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆ ಗೇರಿಸಲಾಗಿದ್ದು, ಕಿ.ಮೀ.ಗೆ ಒಂದು ಕೋಟಿಯಂತೆ ಖರ್ಚು ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆ ಮೂಲಕ ಕೈಗೆತ್ತಿಕೊಳ್ಳಲಾದ ಕಾಮಗಾರಿ ವರ್ಷವಾಗುತ್ತಲೇ ತನ್ನ ನಿಜ ಬಣ್ಣವನ್ನು ಬಯಲು ಮಾಡಿದ್ದು, ಅಲ್ಲಲ್ಲಿ ಗುಂಡಿಗಳು ಕಂಡುಬಂದಿವೆ. ಕಾರೇಕೊಪ್ಪ ಗ್ರಾಮದ ತಿರುವಿನಲ್ಲಿ ಈಗಾಗಲೇ ರಸ್ತೆ ಕಿತ್ತುಬಂದಿದ್ದು, ಕಾಮಗಾರಿಯ ಗುಣಮಟ್ಟಕ್ಕೆ ಸಾಕ್ಷಿ ಒದಗಿಸಿದೆ.
ಎಸ್ಹೆಚ್ಡಿಪಿ ಯೋಜನೆಯಡಿ 17 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಸರ್ಕಾರದಿಂದ 17.88 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಈ ಹಿಂದೆ ಇದ್ದ ರಸ್ತೆಯ ಮೇಲ್ಪದರವನ್ನು ಸಂಪೂರ್ಣವಾಗಿ ತೆಗೆದು ನೂತನವಾಗಿ ಡಾಂಬರು ಹಾಕುವದು, ರಸ್ತೆಯ ಎರಡೂ ಬದಿಯಲ್ಲಿ ಶೋಲ್ಡರ್ಸ್ ನಿರ್ಮಾಣ, ಅಗತ್ಯವಿರುವ ಕಡೆಗಳಲ್ಲಿ ಮೋರಿ, ಸೇತುವೆ ನಿರ್ಮಾಣ, ಮಾರ್ಕಿಂಗ್, ಸೂಚನಾ ಫಲಕಗಳ ಅಳವಡಿಕೆಗೆ ಕ್ರಿಯಾಯೋಜನೆಯಲ್ಲಿ ಅನುದಾನ ಮೀಸಲಿರಿಸಲಾಗಿತ್ತು. ಕಾಮಗಾರಿ ನಡೆಯುವ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಖುದ್ದು ನಿಂತು ಗುಣಮಟ್ಟಕ್ಕೆ ಆಗ್ರಹಿಸಿದ ಸ್ಥಳಗಳಲ್ಲಿ ರಸ್ತೆ ಸುಸ್ಥಿತಿಯಲ್ಲಿದ್ದು, ಉಳಿದ ಕಡೆಗಳಲ್ಲಿ ರಸ್ತೆಯ ಗುಣಮಟ್ಟದ ಬಗ್ಗೆ ಇಂಜಿನಿಯರ್ಗಳೇ ಉತ್ತರ ನೀಡಬೇಕಿದೆ.
ಗುತ್ತಿಗೆದಾರರ ನಿರ್ವಹಣಾ ಅವಧಿ ಕಳೆದ ಮಳೆಗಾಲಕ್ಕೆ ಮುಗಿದಿದ್ದರೂ, ಈ ಮಳೆಗಾಲದ ಸಮಯದಲ್ಲಿ ಅವರುಗಳೇ ನಿರ್ವಹಣೆ ಮಾಡಬೇಕಿದೆ. ಚರಂಡಿ, ಮೋರಿಗಳ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ಇದೀಗ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ವೆಟ್ಮಿಕ್ಸ್/ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಲಾಗುವದು ಎಂದು ಲೋಕೋಪಯೋಗಿ ಅಭಿಯಂತರ ಪೀಟರ್ ತಿಳಿಸಿದ್ದಾರೆ.