ಗೋಣಿಕೊಪ್ಪಲು, ಮಾ. 17: ಪ್ರತಿಯೊಬ್ಬರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ರೆ. ಮದುಲೇಮುತ್ತು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಕ್ರೀಡಾ ವಿಭಾಗ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾಲ್ಚೆಂಡು ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕ್ರೀಡೆ ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡೆಗೆ ಉತ್ತೇಜನ ಸಿಗುವದು ಆಶಾದಾಯಕ ವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ದೈಹಿಕ ಶಿಕ್ಷಕರಾದ ಪ್ರೊ. ರಾಕಿ ಪೂವಣ್ಣ, ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. 14 ತಂಡಗಳ ನಡುವೆ ನಡೆದ ಈ ಪಂದ್ಯಾಟದಲ್ಲಿ ಸೆಂಟ್ ಫಿಲೋಮಿನಾ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದರೆ ಸರ್ಕಾರಿ ಪದವಿಪೂರ್ವ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ತಂಡ ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.