ಮಡಿಕೇರಿ, ಮಾ. 17: ಸರಕಾರಿ ಕಚೇರಿಗಳೆಂದ ಮೇಲೆ ಅದಕ್ಕೊಂದಿಷ್ಟು ಭದ್ರತೆ, ರಕ್ಷಣಾ ವ್ಯವಸ್ಥೆಗಳಿರುತ್ತದೆ. ಅದರಲ್ಲೂ ನಾಡಿನ ರೈತರ, ಕೃಷಿಕರ ಸರ್ವ ದಾಖಲೆ ಪತ್ರಗಳ ನಿರ್ವಹಣೆಯ ಮಹತ್ತರ ಜವಾಬ್ದಾರಿ ಹೊತ್ತಿರುವ ನಾಡಕಚೇರಿಗಳು ಸಮರ್ಪಕ ವ್ಯವಸ್ಥೆಯಿಂದ ಕೂಡಿರಬೇಕಾಗಿದೆ. ಆದರೆ..., ಜಿಲ್ಲೆಯ ಗಡಿಭಾಗವಾದ ಸಂಪಾಜೆಯಲ್ಲಿರುವ ನಾಡಕಚೇರಿಗೆ ಸೂರೇ ಇಲ್ಲವೆಂದರೆ ಅಚ್ಚರಿಯೇ ಸರಿ...! ಬಿಸಿಲು, ಮಳೆ ನೀರು ಒಳನುಸುಳದಂತೆ ‘ಟಾರ್ಪಲ್’ ಹೊದಿಕೆಯ ರಕ್ಷಣೆಯೊಂದಿಗೆ ಈ ನಾಡ ಕಚೇರಿ ತನ್ನ ಅಂತ್ಯಕಾಲವನ್ನು ಕರೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.ಹಳೆಯ ಕಾಲದ ಸಂಪಾಜೆ ನಾಡಕಚೇರಿ ಮರದ ಪಕ್ಕಾಸುಗಳು ಮತ್ತು ಹಂಚುಗಳ ಶಿಥಿಲತೆ ಯಿಂದಾಗಿ ಸೋರುತ್ತಿದ್ದು. ಟಾರ್ಪಲ್ ಹೊದಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರ್ತವ್ಯ ನಿರ್ವಹಿ ಸುತ್ತಿರುವ ಉದ್ಯೋಗಿಗಳು ಭಯ ದಿಂದಲೇ ಕೆಲಸ (ಮೊದಲ ಪುಟದಿಂದ) ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಡಿಕೇರಿ ತಾಲೂಕು ಕೇಂದ್ರದ ಸಂಪಾಜೆ ಹೋಬಳಿಯ ನಾಡಕಚೇರಿ ಪೆರಾಜೆ, ಸಂಪಾಜೆ, ಮದೆ, ಚೆಂಬು, ಕಾಟಿಕೇರಿ, ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು, ಹೆರವನಾಡು, ಅರ್ವತ್ತೊಕ್ಲು ಮೊದಲಾದ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.
ಆದರೆ ಕಟ್ಟಡ ಬ್ರಿಟಿಷರ ಕಾಲದಾಗಿದ್ದು, ಮಳೆ ಬಂದರೆ ಸೋರುವ ಸ್ಥಿತಿ. ಇದಕ್ಕೆ ಪರಿಹಾರ ವಾಗಿ ಕಟ್ಟಡಕ್ಕೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹಾಸಲಾಗಿದೆ. ಇಲ್ಲಿ ಸಾವಿರಾರು ಜನರ ಮೂಲದಾಖ ಲಾತಿಯಿದ್ದು, ಅದು ಮಳೆ ಬಂದರೆ ಒದ್ದೆಯಾಗುವ ಸ್ಥಿತಿ ನಿರ್ಮಾಣ ವಾಗಿದೆ.
ನಾಡಕಚೇರಿ ಸಂಪೂರ್ಣ ಬೀಳುವ ಸ್ಥಿತಿ ಒಂದು ಕಡೆಯಾದರೆ ಇಲ್ಲಿ ಇಂಟರ್ನೆಟ್ ಸಮಸ್ಯೆಯೂ ಇನ್ನೊಂದು ಕಡೆಯಾಗಿದೆ. ಇದರಿಂದ ಅಂತರ್ಜಾಲದ ಮೂಲಕ ಆಗುವ ಕೆಲಸಗಳು, ಸಾಮಾನ್ಯರಿಗೆ ಬೇಕಾಗುವ ಆರ್ಟಿಸಿ ಇತರ ಎಲ್ಲ ಕೆಲಸ ಕಾರ್ಯಗಳು ಕಡಿತಗೊಂಡು ಕಚೇರಿ ವ್ಯಾಪ್ತಿಯ ಜನ ಪ್ರತಿದಿನ ಕೆಲಸ ಕಾರ್ಯಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. 30 ಕಿ.ಮೀ. ದೂರ ಇರುವ ಮಡಿಕೇರಿ ಕೇಂದ್ರ ಕಚೇರಿಯನ್ನೇ ಅವಲಂಭಿಸುವ ಸ್ಥಿತಿ ನಿರ್ಮಾಣವಾಗಿದೆ.
ಉಪತಹಶೀಲ್ದಾರರಿಲ್ಲ: ಸಂಪಾಜೆ ನಾಡಕಚೇರಿ 10 ಗ್ರಾಮಗಳನ್ನು ಹೊಂದಿದ್ದು, ಇಲ್ಲಿ ಉಪತಹಶೀಲ್ದಾರ್ ಇರಬೇಕಾಗಿದೆ. ಆದರೆ ಉಪತಹ ಶೀಲ್ದಾರರ ನಾಮಫಲಕ ಮಾತ್ರವಿದ್ದು, ಎರಡೂವರೆ ವರ್ಷದಿಂದ ಈ ಕಚೇರಿಗೆ ಉಪತಹಶೀಲ್ದಾರರು ಬಂದಿಲ್ಲ. ಸುಮಾರು 3 ತಿಂಗಳಿನಿಂದ ಕಂದಾಯ ನಿರೀಕ್ಷಕರು ಕಚೇರಿಯಲ್ಲಿ ಲಭ್ಯರಿಲ್ಲ. ಗ್ರಾಮಕರಣಿಕರು ಬಂದು ಹೋಗುತ್ತಾರೆ ಹೊರತು, ಜನರ ಸಮಸ್ಯೆಗಳಿಗೆ ಯಾವದೇ ಸ್ಪಂದನ ನೀಡುತ್ತಿಲ್ಲ. ದೂರದ ರೈತರು ಕಚೇರಿಯಲ್ಲಿ ಬಂದು ಕಾದು ಕಾದು ವಾಪಸ್ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ನೆಟ್ ಸಮಸ್ಯೆ: ಗ್ರಾಮಲೆಕ್ಕಿಗರು ಕಚೇರಿಯಲ್ಲಿ ಇದ್ದರೂ, ನೆಟ್ ಸಮಸ್ಯೆಯಿಂದಾಗಿ ರೈತರು ಕಂಗೆಟ್ಟಿದ್ದಾರೆ, ಮೇಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಪದೇ ಪದೇ ಈ ಸಮಸ್ಯೆ ಬಗ್ಗೆ ಮನವಿ ನೀಡಿದರೂ ಯಾವದೇ ಪ್ರಯೋಜನವಿಲ್ಲ. ಇತ್ತೀಚೆಗೆ ಪ್ರಕಟಣೆಗೊಂಡ ಕೊಳೆರೋಗ ಪರಿಹಾರದಿಂದ ಕೊಡಗು ಸಂಪಾಜೆ ಗ್ರಾಮಸ್ಥರು ವಂಚಿತರಾಗಿದ್ದಾರೆ. ಅಲ್ಲದೆ ಕಚೇರಿಯಲ್ಲಿ ಮಳೆಗಾಲದಲ್ಲಿ ಕೊಡೆ ಹಿಡಿದು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಕಂಗೆಟ್ಟ ಜನರಿಗೆ ಕಚೇರಿಯಲ್ಲಿ ಸಿಗುವ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳ ಸರಮಾಲೆ ಯನ್ನು ಹೊಂದಿದ್ದ, ನಾಡ ಕಚೇರಿ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಿ ಎಂಬದು ಈ ಭಾಗದ ಜನರ ಬೇಡಿಕೆಯಾಗಿದೆ.
- ಗಿರೀಶ್ ಪೆರಾಜೆ