ಮಡಿಕೇರಿ, ಮಾ: 17: ವಿದ್ಯಾರ್ಥಿ ಜೀವನದಲ್ಲಿನ ಪ್ರಮುಖ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಈ ಬಾರಿ ತಾ. 21 ರಿಂದ ಆರಂಭಗೊಳ್ಳಲಿದ್ದು, ಏಪ್ರಿಲ್ 4ರ ತನಕ ನಡೆಯಲಿದೆ. ವ್ಯವಸ್ಥಿತವಾದ ಪರೀಕ್ಷೆಯನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 6,725(ಮೊದಲ ಪುಟದಿಂದ) ವಿದ್ಯಾರ್ಥಿಗಳು ಹಾಗೂ ಖಾಸಗಿ ಯಾಗಿ 107 ಮಂದಿ ಸೇರಿದಂತೆ 6,832 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಡಿಕೇರಿ ತಾಲೂಕಿನಲ್ಲಿ 8, ವೀರಾಜಪೇಟೆಯಲ್ಲಿ 8 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 11 ಕೇಂದ್ರಗಳು ಸೇರಿದಂತೆ ಒಟ್ಟು 27 ಕೇಂದ್ರಗಳು ಕಾರ್ಯನಿರ್ವಹಿಸಲಿವೆ.ಕಟ್ಟುನಿಟ್ಟಿನ ಪರೀಕ್ಷಾ ಕ್ರಮ ಅನುಸರಿಸಲು ಹಾಗೂ ಅಕ್ರಮಗಳಿಗೆ ಅವಕಾಶವಾಗದ ರೀತಿಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಉಪನಿರ್ದೇಶಕರ ನೇತೃತ್ವದಲ್ಲಿ ಸಭೆಗಳನ್ನು ನಡೆಸ ಲಾಗಿದ್ದು, ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಮೇಲ್ವಿಚಾರಕರೊಂದಿಗೆ ಸಿಟ್ಟಿಂಗ್ ಸ್ಕ್ವಾಡ್, ಪ್ಲೇಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾಮಟ್ಟದ ವಿಶೇಷ ತಂಡವೂ ಈ ಸಂದರ್ಭಗಳಲ್ಲಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸಲಿದೆ.ಡಿಜಿಟಲ್ ವಾಚ್ ಇಲ್ಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಡಿಜಿಟಲ್ ವಾಚ್‍ಗಳನ್ನು ಬಳಸುವಂತಿಲ್ಲ. ಅಲ್ಲದೆ ಆಯಾ ಪರೀಕ್ಷಾ ದಿನಗಳಂದು ನಿಗದಿತ ಸಮಯಕ್ಕೆ ಹಾಜರಾಗಬೇಕಿದೆ. ಬೆಳಿಗ್ಗೆ 9.30 ರಿಂದ ಪರೀಕ್ಷೆ ಆರಂಭ ಗೊಳ್ಳಲಿದ್ದು, ಒಂದು ವೇಳೆ 9.45ರ ನಂತರ ಆಗಮಿಸಿದ ಪಕ್ಷದಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಚ್ಚಾಡೋ ಅವರು ವ್ಯವಸ್ಥೆಗಳ ಬಗ್ಗೆ ‘ಶಕ್ತಿ’ಗೆ ವಿವರ ನೀಡಿದ ಸಂದರ್ಭ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ವಿವರ

ಮಡಿಕೇರಿ ತಾಲೂಕಿನಿಂದ 1,947, ವೀರಾಜಪೇಟೆ ತಾಲೂಕಿ ನಿಂದ 2,157, ಸೋಮವಾರಪೇಟೆ ತಾಲೂಕಿನಿಂದ 2,611 ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ 107 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ 2,012, ಅನುದಾನಿತ ಶಾಲೆಗಳ 2,549 ಹಾಗೂ ಅನುದಾನ ರಹಿತ ಶಾಲೆಗಳ 2,164 ವಿದ್ಯಾರ್ಥಿ ಗಳಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ಅವಧಿಯಲ್ಲಿ ಪ್ರಾಕೃತಿಕ ದುರಂತದಿಂದಾಗಿ ಹಲವು ಸಮಯ ಶಾಲೆಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ಶನಿವಾರಗಳಂದು ಇಡೀ ದಿನ ತರಗತಿ ನಡೆಸಲಾಗಿದೆ. ಅಕ್ಟೋಬರ್‍ನಲ್ಲಿಯೂ ರಜೆ ಕಡಿತ ಮಾಡಲಾಗಿತ್ತು. ವಿವಿಧ ಶಾಲೆಗಳಲ್ಲಿ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಿದ್ದಾರೆ. ಅಲ್ಲದೆ ಹಲವಾರು ಶಿಕ್ಷಕರು ಮಕ್ಕಳಿಗೆ ಮೊಬೈಲ್ ಮೂಲಕ ಬೆಳಿಗ್ಗೆ ಬೇಗ ಎದ್ದು ಓದಲು ಅನುಕೂಲವಾಗುವಂತೆ ‘ವೇಕಪ್ ಕಾಲ್’ ಮೂಲಕ ಮಕ್ಕಳನ್ನು ಸಜ್ಜುಗೊಳಿಸಿದ್ದಾರೆ. ಹಲವೆಡೆಗಳಲ್ಲಿ ರಾತ್ರಿ ಕೂಡ ವಿಶೇಷ ತರಬೇತಿ ನೀಡಲಾಗಿದೆ ಎಂದು ಮಚ್ಚಾಡೋ ಅವರು ವಿವರವಿತ್ತರು.

ಸೋಲಾರ್ ದೀಪ

ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ವಿದ್ಯುತ್‍ನ ಸಮಸ್ಯೆ ಇದ್ದ ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು ಅಭಿವೃದ್ಧಿ ಸಂಸ್ಥೆ ಹಾಗೂ ಶೆಲ್ ಕಂಪೆನಿಯಿಂದ ನಿರಂತರವಾಗಿ ಮೂರು ಗಂಟೆಗಳ ಕಾಲ ಉರಿಯುವ ಸೋಲಾರ್ ದೀಪ ವಿತರಣೆ ಮಾಡಲಾಗಿದೆ. ಇದಲ್ಲದೆ, ರಾಮನಗರದ ಟೊಯಾಟೊ ಕಂಪೆನಿ ಕೊಡಗು ಹಾಗೂ ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕನಿಷ್ಟ ಉತ್ತೀರ್ಣಕ್ಕೆ ಅನುಕೂಲವಾಗುವಂತಹ ಯಶಸ್ಸು ಎಂಬ ಮಾರ್ಗದರ್ಶಿ ಪುಸ್ತಕವನ್ನು ನೀಡಿ ಸಹಕರಿಸಿದೆ ಎಂಬದಾಗಿ ಅವರು ತಿಳಿಸಿದರು. ಕಳೆದ ಬಾರಿಯ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ 18 ಸ್ಥಾನ ಗಳಿಸಿತ್ತು.