ಶ್ರೀಮಂಗಲ, ಫೆ. 10 : ವರ್ಷಂಪ್ರತಿ ಜರುಗುವ ಇತಿಹಾಸ ಪ್ರಸಿದ್ದ ಮತ್ತು ವಿವಿಧ ಧರ್ಮದವರ ಸಹೋದರತೆಯನ್ನು ಸಾರುವ ಭಾವೈಕ್ಯತೆಯ ಕೇಂದ್ರವಾದ ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮಕ್ಕೆ ಶುಕ್ರವಾರವಾರದಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಮುಂದಿನ ಮಂಗಳವಾರದವರೆಗೆ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ನಡೆಯಲಿರುವ ಈ ವಾರ್ಷಿಕ ಉರೂಸ್ ಕಾರ್ಯಕ್ರಮ ಒಟ್ಟು 5 ದಿನಗಳ ಕಾಲ ಜಾತಿ ಮತಗಳ ಬೇದವಿಲ್ಲದೆ ನಡೆಯಲಿದೆ.

ಶುಕ್ರವಾರ ಪವಿತ್ರವಾದ ಜುಮಾ ನಮಾಝ್ ನಂತರ ಮಖಾಂ ಅಲಂಕಾರ ಕಾರ್ಯಕ್ರಮದೊಂದಿಗೆ ಅಂಬಟ್ಟಿ ಉರೂಸ್‍ನ ವಿಧಿ ವಿಧಾನ ಆರಂಭಗೊಂಡಿತು. ಬಳಿಕ ನಡೆದ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಸಲಾಂ ಹಳ್‍ರಮಿ ಅವರು ನೇತೃತ್ವ ನೀಡಿದರು. ಇದಾದ ನಂತರ ಅಂಬಟ್ಟಿ ಜುಮಾ ಮಸೀದಿಯ ಅಡಳಿತ ಮಂಡಳಿ ಅಧ್ಯಕ್ಷರಾದ ಕೆ.ಪಿ. ಸಾದಲಿ ಹಾಜಿ ಅವರು ದ್ವಜಾರೋಹಣ ನೆರವೇರಿಸುವ ಮೂಲಕ ಅಂಬಟ್ಟಿ ಉರೂಸ್‍ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಕೆ.ಪಿ. ಸಾದಲಿ ಹಾಜಿ ಅವರು, ವಾರ್ಷಿಕ ಉರೂಸ್ ಕಾರ್ಯಕ್ರಮಗಳಿಂದ ಜನರಲ್ಲಿ ಪರಸ್ಪರ ಸೌಹಾರ್ದತೆ ವೃದ್ದಿಯಾಗುತ್ತದೆ. ಅಲ್ಲದೆ ಧಾರ್ಮಿಕ ವಿಧಿವಿಧಾನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉರೂಸ್‍ನ ಮೊದಲ ದಿನದ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಪ್ರವಚನÀ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳಾದ ಎಂ.ಎ. ಶಾನು, ಕೆ.ಯೂಸುಫ್. ಕೆ. ಷರೀಫ್, ಆಲೀರ ಸಾದಲಿ, ಪಿ.ಸಿ. ಅಬ್ಬಾಸ್, ಖಾಲಿದ್ ಪೈಝಿ, ಉರೂಸ್ ಸಮಿತಿಯ ಅಧ್ಯಕ್ಷರಾದ ಪಿ.ಎ. ಸಂಶುದ್ದೀನ್, ಕಾರ್ಯಾಧ್ಯಕ್ಷರಾದ ಎಂ.ಕೆ. ಮುಸ್ತಾಫ, ಪದಾಧಿಕಾರಿಗಳಾದ ಪಕ್ರುದ್ದೀನ್, ಕೆ. ಷರೀಫ್, ಎಂ.ಎಸ್. ಶರ್ಪುದ್ದೀನ್, ಎಂ.ಕೆ. ಹ್ಯಾರೀಸ್, ಪಿ.ಸಿ. ಅಲಿ, ಗ್ರಾಮದ ಹಿರಿಯರಾದ ಕಿಕ್ಕರೆ ಮಾಹಿನ್ ಮೊದಲಾದವರು ಉಪಸ್ಥಿತರಿದ್ದರು. ಜುಮಾ ಸಮಾಝ್‍ಗೂ ಮುನ್ನ ನಡೆದ ಝಿಯಾರತ್ ಕಾರ್ಯಕ್ರಮದಲ್ಲಿ ಕೊಲ್ಲಂನ ಸಲೀಂ ಫಾಝಿಲಿ ತಂಙಳ್ ಅವರು ಭಾಗಿಯಾಗಿದ್ದರು.

ಶನಿವಾರ ರಾತ್ರಿ ಅಂಬಟ್ಟಿ ಸ್ವಲಾತ್ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಜರುಗಿತು. ಮತ ಪಂಡಿತರಾದ ಕಮರುದ್ದೀನ್ ಸಖಾಫಿ ಅವರು ಸ್ವಲಾತ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಮಂಗಳೂರಿನ ಉದಯೋನ್ಮುಖ ಯುವ ಗಾಯಕರಾದ ಸಿಹಾನ್ ಅವರು ನಡೆಸಿಕೊಟ್ಟ ಬುರ್ದಾ ಮಜ್ಲಿಸ್ ಜನಾಕರ್ಷಣೆಯಾಗಿತ್ತು. ಬಳಿಕ ನಡೆದ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಉಸ್ತಾದ್ ಅವರು ನೇತೃತ್ವ ನೀಡಿದರು.