ಕರಿಕೆ/ ಭಾಗಮಂಡಲ, ಡಿ. 24: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರಿಕೆಯಲ್ಲಿ ತಾ. 30ರಂದು ನಡೆಯುವ ಮಡಿಕೇರಿ ತಾಲೂಕು ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ವಹಿಸಿ ಸಮ್ಮೇಳನದ ನೂತನ ಲಾಂಛನವನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ಗಡಿಭಾಗ ಕರಿಕೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಸಂತೋಷದ ವಿಷಯವಾಗಿದ್ದು ಇಲ್ಲಿನ ಗ್ರಾಮಸ್ಥರ ಸಹಕಾರ ಉತ್ತಮವಾಗಿದೆ. ಮುಖ್ಯವಾಗಿ ಹಣಕಾಸಿನ ಸಂಗ್ರಹವಾಗಬೇಕಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಮ್ಮೇಳನಕ್ಕೆ ಆಗಮಿಸುವವರಿಗೆ ವಿಶೇಷವಾಗಿ ಎರಡು ಬಸ್ಸಿನ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆ ಯೊಂದಿಗೆ ಮಾತನಾಡಿದ್ದು ಇಲಾಖೆ ಸಮ್ಮತಿಸಿದೆ ಎಂದರು.

ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಸುಮಾರು ಎರಡು ಕಿ.ಮಿ. ದೂರದಿಂದ ಮೆರವಣಿಗೆ ಹೊರಡಲಿದ್ದು ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಹಾಗೂ ಟ್ಯಾಬ್ಲೊಗಳು ಸೇರಿದಂತೆ ಅನೇಕ ಕಲಾಕೃತಿಗಳು ಪಾಲ್ಗೊಳ್ಳಲಿದ್ದು, ಅಲ್ಲದೆ ಅತಿಥಿಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವದೆಂದರು.

ಮೆರವಣಿಗೆ ಹಾಗೂ ಸಾಂಸ್ಕೃತಿಕ ತಂಡದಲ್ಲಿ ಪಾಲ್ಗೊಂಡ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದರು

ಸಮ್ಮೇಳನದಲ್ಲಿ ವಿಚಾರ ಗೋಷ್ಠಿ, ಕವಿಗೋಷ್ಠಿ,ಸಾಧಕರಿಗೆ ಸನ್ಮಾನ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಮಾಹಿತಿ ಒದಗಿಸಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಗ್ರಾಮಸ್ಥರ ಸಹಕಾರ ಉತ್ತಮವಾಗಿದ್ದು, ಎಲ್ಲರೂ ಒಂದೇ ವೇದಿಕೆಯಡಿ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ಆಚರಿಸೋಣವೆಂದರು.

ಸಭೆಯಲ್ಲಿ ಗ್ರಾಮಪಂಚಾಯಿತಿ ಅಧÀ್ಯಕ್ಷ ಬಾಲಚಂದ್ರ ನಾಯರ್, ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್, ತಾ. ಸಾಹಿತ್ಯ ಪರಿಷತ್ತಿನ ಖಜಾಂಜಿ ಬಾಳೆಕಜೆ ಯೋಗೇಂದ್ರ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ರಮೇಶ್, ತಾ.ಪಂ. ಸದಸ್ಯೆ ಸಂಧ್ಯಾ, ಹೊಸಮನೆ ಹರೀಶ್, ಬಲರಾಮ, ಬೇಕಲ್ ಹರಿಪ್ರಸಾದ್, ಶರಣ್ ಕುಮಾರ್, ಶ್ರೀಧರ್, ರಘುರಾಮ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯದರ್ಶಿ ದಯಾನಂದ ನಿರೂಪಿಸಿದರು.