ಸೋಮವಾರಪೇಟೆ,ಡಿ.24: ಹಾಸನದಿಂದ ಸೋಮವಾರಪೇಟೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಯೊಂದು 63 ಕೆ.ವಿ. ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಾಗಡಿಕಟ್ಟೆ ತಿರುವಿನಲ್ಲಿ ಭಾನುವಾರ ಬೆಳಗ್ಗಿನ ಜಾವ 4.30 ಸುಮಾರಿಗೆ ಸಂಭವಿಸಿದ್ದು, ಭಾರೀ ದುರಂತ ತಪ್ಪಿದೆ.ಪಟ್ಟಣದ ಪ್ಲಾಂಟೇಷನ್ ಸಪ್ಲೈ ಏಜೆನ್ಸಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟ್ರಾನ್ಸ್‍ಫಾರ್ಮರ್‍ಗೆ ಡಿಕ್ಕಿಯಾಗಿದೆ. ಲಾರಿಯ ಚಾಲಕ ಅರಕಲಗೂಡಿನ ಅಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿ ಡಿಕ್ಕಿಯಾದ ರಭಸಕ್ಕೆ ಟ್ರಾನ್ಸ್‍ಫಾರ್ಮರ್ ಸಂಪೂರ್ಣ ನಜ್ಜುಗುಜ್ಜಾಗಿ ಲಾರಿಯ ಮೇಲೆ ಬಿದ್ದಿದ್ದು, ಅವಘಡದ ಹಿಂದಿನ ದಿನವಷ್ಟೇ ಟ್ರಾನ್ಸ್‍ಫಾರ್ಮರ್‍ಗೆ ಪಟ್ಟಣದ ವಿದ್ಯುತ್ ಪ್ರಸರಣ ನಿಗಮದಲ್ಲಿ ಬ್ರೇಕರ್ ಹಾಕಿರುವದರಿಂದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸೆಸ್ಕ್ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಲಾರಿ ಡಿಕ್ಕಿಯಾದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚಾಲಕ ಕೂಗಿಕೊಂಡಾಗ ಸ್ಥಳೀಯರು ಘಟನಾಸ್ಥಳಕ್ಕೆ ಆಗಮಿಸಿ ಚಾಲಕನನ್ನು ಲಾರಿಯಿಂದ ಇಳಿಸಿದ್ದಾರೆ. ಕಾಗಡಿಕಟ್ಟೆ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಸ್ಥಳಾವಕಾಶ ಕಲ್ಪಿಸಲು ಮುಂದಾದ ಸಂದರ್ಭ, ಲಾರಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಡಿಕ್ಕಿಯಾಗಿದೆ ಎಂದು ಚಾಲಕ ಅಂಜನ್ ತಿಳಿಸಿದ್ದಾರೆ.