ಕರಿಕೆ, ಡಿ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರಿಕೆ ಒಕ್ಕೂಟಗಳ ದಶಮಾನೋತ್ಸವ ಹಾಗೂ ಸಾಮೂಹಿಕ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಎಳ್ಳುಕೊಚ್ಚಿ ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮವನ್ನು ಶ್ರೀ ಗೌರಿಶಂಕರ ಭಟ್ ಹಾಗೂ ತಂಡದವರು ನೆರವೇರಿಸಿದರು. ಧರ್ಮಸ್ಥಳ ಭಜನಾ ತಂಡದ ಸದಸ್ಯರು ಭಜನಾ ಕಾರ್ಯಕ್ರಮ ನೆರವೇರಿಸಿಕೊಟ್ಟರು. ನಂತರ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಕರಿಕೆ ಉಪವಲಯಾರಣ್ಯಾಧಿಕಾರಿ ಪಿ.ಟಿ. ಶಶಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರಲ್ಲಿ ಧಾರ್ಮಿಕ ಮನೋಭಾವನೆ ಬಿತ್ತುವ ಕೆಲಸವನ್ನು ಮಾಡುತ್ತಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಹತ್ತಾರು ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ವದ ಹೆಜ್ಜೆಯನ್ನು ಇಡುತ್ತಿದ್ದಾರೆ.

ದೇವರ ಪೂಜೆ, ಭಜನೆಗಳ ಆಚರಣೆಯಿಂದ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸೀತಾರಾಮ ಶೆಟ್ಟಿ, ಯೋಜನಾಧಿಕಾರಿ ಸದಾಶಿವ ಗೌಡ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಸದಸ್ಯೆ ಸಂದ್ಯಾ, ಪ್ರಗತಿಪರ ಕೃಷಿಕ ಮಧುಕರ ಆಚಾರ್, ವಿ.ಎಸ್.ಎಸ್.ಎನ್. ಅಧ್ಯಕ್ಷ ರಘುರಾಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಿತ್ರಕುಮಾರ್, ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಸೇರಿದಂತೆ ಎಲ್ಲಾ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಭಾಗಮಂಡಲ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮೇಲ್ವಿಚಾರಕ ಚೇತನ್ ಕಾರ್ಯಕ್ರಮ ನಿರೂಪಿಸಿ, ನಾಪೋಕ್ಲು ಸೇವಾ ಪ್ರತಿನಿಧಿ ಬಾಳೆಯಡ ದಿವ್ಯಾ ಸ್ವಾಗತಿಸಿದರು.