ಸಿದ್ದಾಪುರ, ನ. 24 : ಕಳೆದ ಕೆಲವು ತಿಂಗಳಿನಿಂದ ಹುಲಿಯೊಂದು ಜಾನುವಾರಗಳ ಮೇಲೆ ಧಾಳಿ ನಡೆಸಿ ಸಾಯಿಸಿರುವ ಘಟನೆಯ ಬಳಿಕ ಇದೀಗ ಹುಲಿಯು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವದು ಗ್ರಾಮಸ್ಥರಿಗೆ ಅತಂಕ ಸೃಷ್ಟಿಸಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲ್ದಾರೆ ಗೇಟ್ ಹಾಡಿ, ಮೈಲಾತ್‍ಪುರದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಹುಲಿಯು ಜನವಸತಿ ಪ್ರದೇಶಗಳಲ್ಲಿ ಹಾಗೂ ಅರಣ್ಯದಂಚಿನಲ್ಲಿ ಕಾಣಿಸಿಕೊಳ್ಳುತ್ತಿದೆ.

ಈಗಾಗಲೇ ಮಾಲ್ದಾರೆ ವ್ಯಾಪ್ತಿಯಲ್ಲಿ ಜಾನುವಾರಗಳ ಮೇಲೆ ಧಾಳಿ ನಡೆಸಿದ ಹುಲಿಯನ್ನು ಸೆರೆಹಿಡಿಯಲು ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹುಲಿಯನ್ನು ಸೆರೆಹಿಡಿಯಲು ಇತ್ತೀಚೆಗೆ 2 ಜಾನುವಾರಗಳನ್ನು ಸಾಯಿಸಿದ ಸ್ಥಳದಲ್ಲಿ ಬೋನ್ ಇರಿಸಲಾಗಿದೆ. ಅಲ್ಲದೆ ಮೃತಪಟ್ಟ ಜಾನುವಾರಗಳ ಪೈಕಿ 1 ಜಾನುವಾರುವಿನ ಕೊಳೆತ ಮೃತದೇಹವನ್ನು ಕಾಫಿ ತೋಟದ ಒಳಗೆ ಇಡಲಾಗಿದೆ. ಆದರೆ ಹುಲಿಯು ಬೋನ್ ಇರಿಸಿದ ಸ್ಥಳಕ್ಕೆ ತೆರಳದೆ ಜನವಸತಿ ಪ್ರದೇಶದ ಸುತ್ತಲು ಸುತ್ತಾಡುತ್ತಿರುವದನ್ನು ಗ್ರಾಮಾಸ್ಥರು ಗಮನಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರ್.ಆರ್.ಟಿ. ತಂಡದವರು ಹುಲಿಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಹಗಲಿರುಲು ಶ್ರಮಿಸುತ್ತಿದ್ದು ಹುಲಿಯನ್ನು ಸೆರೆಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈತನ್ಮಧ್ಯೆ ಚಿರತೆಯ ಉಪಟಳವು ಕೂಡ ಮಾಲ್ದಾರೆ ವ್ಯಾಪ್ತಿಯಲ್ಲಿ ಇದೆ ಎನ್ನಲಾಗಿದೆ. ಜನವಸತಿ ವ್ರದೇಶದಲ್ಲಿ ಕಾಣಿಸಿಕೊಂಡಿರುವ ಹಾಗೂ ಜಾನುವಾರಗಳ ಮೇಲೆ ಧಾಳಿ ನಡೆಸಿ ಆತಂಕ ಸೃಷ್ಟಿಸಿರುವ ಹುಲಿಯಿಂದಾಗಿ ಇದೀಗ ಕಾಫಿ ಕೊಯ್ಲಿಗೆ ತೋಟದೊಳಗೆ ತೆರಳಲು ಕಾರ್ಮಿಕರು ಭಯಭೀತರಾಗಿದ್ದಾರೆ. ಅಲ್ಲದೇ ಮೈಲಾತ್‍ಪುರ ವ್ಯಾಪ್ತಿಯ ತೋಟದ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ತೆರಳಲು ಭಯದ ವಾತವರಣ ಮೂಡಿದೆ.

ಈ ಹಿನ್ನಲೆಯಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯ ಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

-ವಾಸು