ಮಡಿಕೇರಿ, ಅ. 20: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ, ದಿಢೀರ್ ಮಡಿಕೇರಿಗೆ ಬಂದು, ಇಲ್ಲಿನ ದೃಶ್ಯ ಮಾದ್ಯಮದೊಂದಿಗೆ ಅಂದಿನ ರಾಜ್ಯ ಗೃಹಮಂತ್ರಿ ಹಾಗೂ ತನ್ನಿಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ನೇರ ಆರೋಪ ಹೊರಿಸಿದ ಬೆನ್ನಲ್ಲೇ ಸಾವಿಗೆ ಶರಣಾಗಿರುವ ಡಿವೈಎಸ್‍ಪಿ ಎಂ.ಕೆ. ಗಣಪತಿ ಪ್ರಕರಣ ಇದೀಗ ಮತ್ತೆ ಗರಿಗೆದರಿಕೊಂಡು ಹಲವು ಅನುಮಾನಗಳ ಹುತ್ತ ಸೃಷ್ಟಿಸಿದಂತಿದೆ.ಇಲ್ಲಿನ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ವಸತಿಗೃಹವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಳೆದ ವರ್ಷ ಜುಲೈ 7 ರಂದು ಸಂಜೆಗತ್ತಲೆ ನಡುವೆ ಗೋಚರಿಸಿತ್ತು. ಈ ವೇಳೆಗೆ ಅವರು ಸಾಯುವ ಮುನ್ನ ಅಂದಿನ ಗೃಹಮಂತ್ರಿ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎನ್. ಪ್ರಸಾದ್ ಹೆಸರು ಉಲ್ಲೇಖಿಸಿ ತನಗೆ ಏನೇ ಆದರೂ ಈ ಮೂವರು ನೇರ ಹೊಣೆಗಾರರು ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ಪೊಲೀಸ್ ಅಧಿಕಾರಿಯ ಸಾವಿನ ಬೆನ್ನಲ್ಲೇ ಮಾಧ್ಯಮಗಳಲ್ಲಿ ಅವರ ಹೇಳಿಕೆಯೂ ಬಿತ್ತರಗೊಂಡು, ರಾಜ್ಯದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆದಿತ್ತು. ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರು ಅಲ್ಲವೆಂದೂ, ಸಾವಿನ ಬಗ್ಗೆ ಉನ್ನತ ತನಿಖೆಯಾಗಬೇಕೆಂದೂ ಡಿವೈಎಸ್‍ಪಿ ತಂದೆ ಎಂ.ಕೆ. ಕುಶಾಲಪ್ಪ ಆಗ್ರಹಿಸಿದ್ದರು. ಮೃತ ಡಿವೈಎಸ್‍ಪಿ ಪತ್ನಿ ಕೂಡ ತನ್ನ ಪತಿಯ ಹೇಳಿಕೆಗೆ ಬದ್ಧರೆಂದು ಘೋಷಿಸಿದ್ದರು. ಆ ವೇಳೆಗಾಗಲೇ ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿಭಿನ್ನ ಹೇಳಕೆಗಳಿಂದ ರಾಜ್ಯದ ಜನತೆ ರೊಚ್ಚಿಗೆದ್ದು, ವ್ಯಾಪಕ ಹೋರಾಟ ನಡೆಸಿ ಉನ್ನತ ತನಿಖೆಗೆ ಆಗ್ರಹಪಡಿಸಿದ್ದು, ಇಲ್ಲಿ ಉಲ್ಲೇಖನೀಯ.

ಈ ನಡುವೆ ಮೃತರ ತಂದೆ ಹಾಗೂ ಸಹೋದರ ಸಹಿತ ಕುಟುಂಬ ಸದಸ್ಯರು ರಾಜ್ಯ

(ಮೊದಲ ಪುಟದಿಂದ) ಪೊಲೀಸ್ ಗುಪ್ತಚರ ವಿಭಾಗದ ತನಿಖೆ ವಿರುದ್ಧ ಆಕ್ರೋಶದೊಂದಿಗೆ ಸಿಬಿಐ ತನಿಖೆಗೆ ಆಗ್ರಹಿಸುತ್ತಲೇ ಬಂದಿದ್ದರು. ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಈ ಬೇಡಿಕೆಗೆ ಮಾನ್ಯ ಮಾಡಿತು. ಆ ಮುನ್ನ ನಾಟಕೀಯ ಬೆಳವಣಿಗೆಗಳ ನಡುವೆ ಅಂದಿನ ಗೃಹ ಸಚಿವರು ರಾಜೀನಾಮೆ ನೀಡಿದ್ದರಾದರೂ, ಮೂರ್ನಾಲ್ಕು ತಿಂಗಳಿನಲ್ಲಿ ಡಿವೈಎಸ್‍ಪಿ ಆತ್ಮಹತ್ಯೆ ಸಂಬಂಧ ತನಿಖೆ ಪೂರ್ಣಗೊಳಿಸಿದ ಸಿಐಡಿ ಪೊಲೀಸರು ಕೆ.ಜೆ. ಜಾರ್ಜ್ ಸಹಿತ ಪೊಲೀಸ್ ಅಧಿಕಾರಿಗಳಿಗೂ, ಡಿವೈಎಸ್‍ಪಿ ಸಾವಿಗೂ ಸಂಬಂಧ ನಿರಾಕರಿಸಿ ಸರಕಾರಕ್ಕೆ ವರದಿ ನೀಡಿತ್ತು.!

ಈ ವರದಿ ಮುಂದಿಟ್ಟುಕೊಂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಂಡು ಜನತೆಯ ವಿರೋಧದ ನಡುವೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿದ್ದರು. ಅಲ್ಲದೆ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ್ ನೇತೃತ್ವದ ಮತ್ತೊಂದು ತನಿಖಾ ಆಯೋಗವನ್ನು ರಚಿಸಿತ್ತು.

ಸಿಬಿಐ ಬಿಸಿ : ಇಂತಹ ರಾಜಕೀಯ ಮೇಲಾಟಗಳ ನಡುವೆ ಡಿವೈಎಸ್‍ಪಿ ಸಾವಿಗೆ ಸಂಬಂಧಪಟ್ಟಂತೆ, ಮೃತರ ತಂದೆ ಸಲ್ಲಿಸಿದ್ದ ಮೇಲ್ಮನವಿ ಹಾಗೂ ಸಂಶಯಗಳ ಕುರಿತು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯ ಇಡೀ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐಗೆ ನಿರ್ದೇಶಿಸಿದೆ.

ವರದಿ ಕೇಳಿದ ಸಿಬಿಐ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಇದೀಗ ಸಿಬಿಐ ರಾಜ್ಯ ಪೊಲೀಸ್ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ನೋಟೀಸ್ ಜಾರಿಗೊಳಿಸಿ ತಾ. 25 ರೊಳಗೆ ಡಿವೈಎಸ್‍ಪಿ ಸಾವಿಗೆ ಸಂಬಂಧಪಟ್ಟಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ. ಮೂಲಗಳ ಪ್ರಕಾರ ಕೊಡಗಿನವರೇ ಆಗಿದ್ದ ಎಂ.ಕೆ. ಗಣಪತಿ ಸಾವಿನ ವೇಳೆ ದಾಖಲಾಗಿರುವ ಪ್ರಥಮ ವರ್ತಮಾನ ವರದಿ, ಸ್ಥಳ ಮಹಜರು, ಪಂಚನಾಮೆ ಸೇರಿದಂತೆ ವೈದ್ಯಕೀಯ ವರದಿ ಸಹಿತ ಮೃತರ ಬಳಿಯಿದ್ದ ಸ್ವತ್ತು ಸ್ವಾಧೀನ ಪಡೆದಿರುವ ಸಂಪೂರ್ಣ ಮಾಹಿತಿ ನೀಡಬೇಕಿದೆ.

ಸಂಶಯವೇಕೆ?: ಇತ್ತೀಚೆಗೆ ಡಿವೈಎಸ್‍ಪಿ ಸಾವಿಗೆ ಸಂಬಂಧಪಟ್ಟ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಅನೇಕ ಸಂಶಯಗಳು ಹೊರ ಬೀಳುವದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನವಲಯದಲ್ಲಿ ಅನುಮಾನದ ಹುತ್ತ ಕಾಣಿಸಿಕೊಂಡಿದೆ. ಮುಖ್ಯವಾಗಿ ಪೊಲೀಸ್ ಅಧಿಕಾರಿಯ ಮೊಬೈಲ್‍ನಲ್ಲಿ ದಾಖಲಾಗಿದ್ದ ಒಳ - ಹೊರಗಿನ ಕರೆಗಳನ್ನು ನಾಶಗೊಳಿಸಿರುವದು, ಧ್ವನಿ ಸಂಭಾಷಣೆ ಅಳಿಸಿರುವದು, ತರಾತುರಿಯಲ್ಲಿ ಮೃತರು ಉಲ್ಲೇಖಿಸಿದ್ದ ವ್ಯಕ್ತಿಗಳಿಗೆ ಆರೋಪ ಮುಕ್ತಗೊಳಿಸಿರುವ ಸರಕಾರದ ಕ್ರಮ ಮುಂತಾದ ಸಂಶಯವನ್ನು ನಿವಾರಿಸಬೇಕಿದೆ.

ಅಧಿಕಾರಿ ಸ್ಪಷ್ಟನೆ : ಪ್ರಸಕ್ತ ಬೆಳವಣಿಗೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಪ್ರತಿಕ್ರಿಯೆ ಬಯಸಿದಾಗ, ಈಗಾಗಲೇ ಕೊಡಗು ಪೊಲೀಸ್ ಇಲಾಖೆ ಡಿವೈಎಸ್‍ಪಿ ಗಣಪತಿ ಸಾವಿಗೆ ಸಂಬಂಧಿಸಿದ ಸಮಗ್ರ ವರದಿಯೊಂದಿಗೆ ದಾಖಲಾತಿಗಳನ್ನು ರಾಜ್ಯ ಗುಪ್ತಚರ ಇಲಾಖೆಗೆ ಈ ಹಿಂದೆ ಸಲ್ಲಿಸಿರುವದಾಗಿ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಮುಂದೆ ಸಿಬಿಐಗೆ ನೀಡಬೇಕಾಗಿರುವ ವರದಿಯನ್ನು ಸಿಐಡಿ ಅಧಿಕಾರಿಗಳೇ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.