ಮಡಿಕೇರಿ, ಜೂ. 21: ವಿಶ್ವದೆಲ್ಲೆಡೆ ಇಂದು ನಡೆದ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೆ ಕೊಡಗು ಜಿಲ್ಲೆ ಕೂಡ ಸಾಥ್ ನೀಡುವದರೊಂದಿಗೆ, ಜಿಲ್ಲೆಯ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಕಾರ್ಯಾಂಗದೊಂದಿಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ಸಹಿತ ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.ರೋಗಗಳಿಂದ ದೂರವಿರಲು ಪ್ರಾಚೀನ ಆರೋಗ್ಯ ಪದ್ಧತಿಯಾದ ಯೋಗವನ್ನು ಮೈಗೂಡಿಸಿಕೊಳ್ಳುವದು ಅತ್ಯಗತ್ಯ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಅಂತರ್ರಾಷ್ಟ್ರೀಯ ಮೂರನೇ ಯೋಗ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯೋಗ ಸಹಕಾರಿಯಾಗಿದೆ. ಇದರಿಂದ ಆತ್ಮ ಸದೃಢ ಹೆಚ್ಚಲಿದೆ. ಜೊತೆಗೆ ಶಾಂತಿ, ಸಹನೆ, ತಾಳ್ಮೆ ಬೆಳೆಸಿಕೊಳ್ಳಲು ಯೋಗ ಅನುಕೂಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು ಎಂದು ಕಾವೇರಮ್ಮ ಸೋಮಣ್ಣ ಸಲಹೆ ಮಾಡಿದರು.

ಸರ್ಕಾರ ನಗರದ ಯಾವ ದಾದರೂ ಒಂದು ಉದ್ಯಾನವನಕ್ಕೆ ‘ಯೋಗ ಪಾರ್ಕ್’ ನಾಮಕರಣ ಮಾಡಬೇಕೆಂದು ತಿಳಿಸಿದೆ. ಅದರಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಳಿ ಇರುವ ಉದ್ಯಾನವನಕ್ಕೆ ‘ಯೋಗ ಉದ್ಯಾನವನ’ವೆಂದು ಹೆಸರಿಡಲು ನಗರಸಭೆ ತೀರ್ಮಾನ ಕೈಗೊಂಡಿದೆ ಎಂದು ಕಾವೇರಮ್ಮ ಸೋಮಣ್ಣ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಹೆಚ್ಚಿನ ಕೆಲಸವಿದ್ದರೂ ಒತ್ತಡ, ಕೆಲಸ ಇಲ್ಲದಿದ್ದರೂ ಇನ್ನೂ ಒತ್ತಡ, ಇದನ್ನು ನಿವಾರಿಸಲು ಯೋಗ ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದ 180ಕ್ಕೂ ಹೆಚ್ಚು ದೇಶಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವದು ಯೋಗದ ಮಹತ್ವ ತಿಳಿಯುತ್ತದೆ. ದೇಹದ ಒಳಗೆ ಮತ್ತು ಹೊರಗೆ ಸುಸ್ಥಿತಿ ಕಾಪಾಡಿಕೊಳ್ಳಲು ಯೋಗವೊಂದೇ ಮಾರ್ಗ ಎಂದು ಅವರು ಹೇಳಿದರು.

ಆರ್ಟ್ ಆಫ್ ಲಿವಿಂಗ್‍ನ ರಾಜಪ್ಪ ಮಾತನಾಡಿ, ವಿಶ್ವದ ಹಲವು ರಾಷ್ಟ್ರಗಳು ಯೋಗ ಆಚರಣೆ ಒಪ್ಪಿಗೆ ನೀಡಿವೆ. ಯೋಗದಿಂದ ನೈಪುಣ್ಯತೆ ಬರುತ್ತದೆ. ಪ್ರಚೋದನಾತ್ಮಕ ಅಂಶಗಳು ಕಡಿಮೆಯಾಗಲಿವೆ ಎಂದು ಹೇಳಿದರು.

ಯೋಗದ ಮಹತ್ವ ಕುರಿತು ಹಲವರು ಪ್ರಚಾರ ಮಾಡಿದ್ದಾರೆ. ಮನಸ್ಸು ಮತ್ತು ಭಾವನೆಯನ್ನು ಹಿಡಿತಕ್ಕೆ ತರಲು ಪ್ರಾಣಯಾಮ, ಧ್ಯಾನ ಮತ್ತು ಯೋಗ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಋಷಿ ಮುನಿಗಳ ಕೊಡುಗೆ ಅವಿಸ್ಮರಣೀಯ ಎಂದರು.

(ಮೊದಲ ಪುಟದಿಂದ) ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್. ರಾಮಚಂದ್ರ ಮಾತನಾಡಿ ಮೂಳೆ ಮತ್ತು ಮಾಂಸಖಂಡಗಳ ಬಲಪಡಿಸಲು ಯೋಗ ಅಗತ್ಯ ಎಂದು ಹೇಳಿದರು.

ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಮಿತವಾಗಿ ಆಹಾರ ಸೇವೆನೆ ಮಾಡಬೇಕು. ಇದರಿಂದ ಆರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಆರ್ಟ್ ಆಫ್ ಲಿವಿಂಗ್‍ನ ಕೆ.ಡಬ್ಲ್ಯು ಬೋಪಯ್ಯ ಮಾತನಾಡಿ, ಪ್ರಾಣಾಯಾಮ, ಯೋಗ ಮಾಡುವದರಿಂದ ಶರೀರವನ್ನು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಹಿಡಿತ ಸಾಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಯೋಗ ತರಬೇತುದಾರರಾದ ಕೆ.ಕೆ. ಮಹೇಶ್ ಕುಮಾರ್ ಅವರು ಯೋಗ ತರಬೇತಿ ನೀಡಿದರು. ಯೋಗಾಸನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಆಯುಷ್ ಇಲಾಖೆಯ ಸಿಬ್ಬಂದಿಗಳು, ಡಾ. ಪಾಟ್ಕರ್ ಕುಟುಂಬ ಸಹಿತ ಇತರರು ಪಾಲ್ಗೊಂಡಿದ್ದರು. ಆಯುಷ್ ಅಧಿಕಾರಿ ಡಾ. ಶ್ರೀನಿವಾಸ್ ನಿರೂಪಿಸಿ, ಡಾ. ಶುಭಾ ಪ್ರಾರ್ಥಿಸಿ, ಡಾ. ಅಮೂಲ್ಯ ವಂದಿಸಿದರು.

ಎನ್‍ಸಿಸಿ: 19ನೇ ಬೆಟಾಲಿಯನ್ ಎನ್‍ಎನ್‍ಸಿ ವತಿಯಿಂದ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಅಂತರ್ರಾಷ್ಟ್ರೀಯ ಯೋಗದಿನ ಆಚರಿಸಲಾಯಿತು. ಎಲ್ಲಾ ಎನ್‍ಸಿಸಿ ಕೆಡೆಟ್‍ಗಳು ಎಫ್.ಎಂ.ಕೆ.ಎಂ.ಸಿ. ಕಾಲೇಜು ಹಾಗೂ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಯೋಗಾಸನದ ತಾಲೀಮನ್ನು ಆಕರ್ಷಕವಾಗಿ ನಡೆಸಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತರೆ ನಾಲ್ಕು ಸ್ಥಳಗಳಲ್ಲೂ ಕೂಡ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಗೆ ಸೇರಿದ 580 ಎನ್‍ಸಿಸಿ ಕೆಡೆಟ್‍ಗಳು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಎಂಟು ಕಾಲೇಜು ಹಾಗೂ ಹತ್ತೊಂಬತ್ತು ಶಾಲೆಗಳ ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದರು. ಎನ್‍ಸಿಸಿ ನಿರ್ದೇಶನಾಲಯ, ಕರ್ನಾಟಕ ಮತ್ತು ಗೋವಾ ಇವರ ಸಹಭಾಗಿತ್ವದಲ್ಲಿ ನಡೆಸಲಾಯಿತು. ಒಟ್ಟಾರೆ 47,000 ಎನ್‍ಸಿಸಿ ಕೆಡೆಟ್‍ಗಳು ಈ ನಿರ್ದೇಶನಾಲಯದ ಅಡಿಯಲ್ಲಿ ಭಾಗವಹಿಸಿದ್ದವು.

ವೀರಾಜಪೇಟೆ: ಯೋಗದಿಂದ ಮನುಷ್ಯನ ಜ್ಞಾನವನ್ನು ಹೆಚ್ಚಿಸುವ ಮೂಲಕ ಆರೋಗ್ಯ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿ ಹೇಳಿದರು.

ಕಾವೇರಿ ಆಶ್ರಮದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ಕಾವೇರಿ ಯೋಗ ಕೇಂದ್ರದ 18ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಶರಣ ಸ್ವಾಮೀಜಿ ಮಾತನಾಡಿ, ಇಂದು ವಿಶ್ವದ ಎಲ್ಲ ಕಡೆಗಳಲ್ಲಿಯೂ ಯೋಗ ದಿನಾಚರಣೆ ಮಾಡಲಾಗುತ್ತಿದೆ. ನಮ್ಮ ಆಶ್ರಮದಲ್ಲಿ 18 ವರ್ಷಗಳಿಂದಲೂ ಯೋಗ ಗುರು ಸೀತರಾಮ್ ರೈ ಅವರು ಉಚಿತ ಯೋಗ ಶಾಲೆಯನ್ನು ಆಯೋಜಿಸುತ್ತಿದ್ದಾರೆ. ಪ್ರತಿಯೊಬ್ಬರೂ ಯೋಗಭ್ಯಾಸವನ್ನು ಮಾಡುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ, ಯೋಗದಿಂದ ದೇಹಕ್ಕೆ ಉತ್ತಮ ಆರೋಗ್ಯ, ಮನುಷ್ಯನಿಗೆ ಯಾವದೇ ಕಾಯಿಲೆಗಳಿದ್ದರೂ ದೂರವಾಗುತ್ತದೆ. ಯೋಗದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯುವಂತಾಗಬೇಕು ಎಂದು ಹೇಳಿದರು.

ಕಾವೇರಿ ಆಶ್ರಮದ ಉಪಾಧ್ಯಕ್ಷ ಬಿ.ಬಿ. ನಾಣಯ್ಯ ಮಾತನಾಡಿ ಆರೋಗ್ಯ ಚೆನ್ನಾಗಿರಬೇಕಾದರೇ ಯೋಗ ಮಾಡಬೇಕು. ಚಿಕ್ಕ ಮಕ್ಕಳಿಂದ ಪ್ರತಿಯೊಬ್ಬರೂ ಯೋಗ ಮಾಡಿದರೆ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಕಾವೇರಿ ಯೋಗ ಕೇಂದ್ರದ ಮುಖ್ಯಸ್ಥ ಸೀತರಾಮ್ ರೈ, ಭಾರತೀಯ ಜೀವ ವಿಮಾ ನಿಗಮದ ವೀರಾಜಪೇಟೆ ಶಾಖೆಯ ವ್ಯವಸ್ಥಾಪಕ ಶಾಮ್ಯಾತ್ಯು, ಸಮಾಜ ಸೇವಕÀ ಅನಿಲ್ ರಾವ್ ಮಾತನಾಡಿದರು. ಯೋಗ ಕೇಂದ್ರದ ಚೇಂದಂಡ ವಸಂತ್ ಸ್ವಾಗತಿಸಿ, ಸಿ.ಗೌರಿ ವಸಂತ್ ಪ್ರಾರ್ಥಿಸಿ, ಬಿದ್ದಂಡ ಗಣಪತಿ ವಂದಿಸಿದರು.

*ಗೋಣಿಕೊಪ್ಪಲು: ಮೂರನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ಕಾವೇರಿ ಕಾಲೇಜು ಮೈದಾನದಲ್ಲಿ ಆರ್ಟ್ ಆಫ್ ಲಿವಿಂಗ್ ಮತ್ತು ಆಯುಷ್ ಆರೋಗ್ಯ ಸಂಸ್ಥೆ ವತಿಯಿಂದ ನಡೆಸಲಾಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾವೇರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು, ಸಂಥ ತೋಮಸ್, ಸರ್ವ ದೈವತಾ ಶಾಲೆಗಳ ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಂಡರು. ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಶಿಕ್ಷಕ ಅಳಮೇಂಗಡ ರಾಜಪ್ಪ ಸುಮಾರು ಹದಿನೈದಕ್ಕೂ ಹೆಚ್ಚು ಆಸನಗಳನ್ನು ಮತ್ತು ಧ್ಯಾನ, ಪ್ರಾಣಾಯಾಮಗಳನ್ನು ಮಾಡುವ ಕ್ರಮಗಳನ್ನು ತಿಳಿಸಿದರು.

ವನವಾಸಿ ಕಲ್ಯಾಣ ದಕ್ಷಿಣ ಮಧ್ಯಕ್ಷೇತ್ರ ಸಂಘಟನಾ ಸಂಚಾಲಕ ಶಿವರಾಮ್‍ಕೃಷ್ಣನ್ ವಿದ್ಯಾರ್ಥಿಗಳನ್ನುದ್ದೇಶಿಸಿ ಯೋಗ ಮತ್ತು ಧ್ಯಾನದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಯಾವದೇ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸುವ ಶಕ್ತಿ ಯೋಗದಿಂದ ದೊರಕುತ್ತದೆ ಎಂದರು.

ಆಯುಷ್ ಇಲಾಖೆಯ ವೈದಾಧಿಕಾರಿ ಎಂ.ಬಿ. ಶ್ರೀನಿವಾಸ ಮಾತನಾಡಿ, ಜೀವನದ ಜಂಜಾಟಗಳನ್ನು ಸರಿಪಡಿಸಲು ಯೋಗದಿಂದ ಸಾಧ್ಯ. ಸದೃಢ ಮನಸ್ಸು ಹೊಂದಲು ಯೋಗ ಸಹಕಾರಿ. ವಿದ್ಯಾರ್ಥಿಗಳು ಯೋಗದ ಮಹತ್ವವನ್ನು ತಿಳಿದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಕಾಲೇಜು ಅಧ್ಯಕ್ಷÀ ಎ.ಸಿ. ಗಣಪತಿ, ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಪದವಿ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರತನ್ ಮಾದಯ್ಯ, ಆರ್ಟ್ ಆಫ್ ಲಿವಿಂಗ್ ಸದಸ್ಯ ವಿ.ಟಿ. ವಾಸು, ಕಾಕಮಾಡ ಗಂಗಾ ಚಂಗಪ್ಪ, ಶಿಬಿರದ ಶಿಕ್ಷಕÀ ಶಾಂತೆಯಂಡ ಬೀನಾ ಮಾಚಯ್ಯ, ಆರ್‍ಎಸ್‍ಎಸ್ ಪ್ರಮುಖ ಚಕ್ಕೇರ ಮನು ಉಪಸ್ಥಿತರಿದ್ದರು.

ಸೋಮವಾರಪೇಟೆ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನಿಯಮಿತ ಯೋಗವೇ ತಳಹದಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಆರ್ಟ್ ಆಫ್ ಲಿವಿಂಗ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಏರುಪೇರಾಗುತ್ತಿದೆ. ಇವುಗಳನ್ನು ಹತೋಟಿಯಲ್ಲಿಡಲು ಯೋಗ ಸಹಕಾರಿಯಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿದೆ. ಅದೇ ರೀತಿ ವಾತಾವರಣವೂ ಕಲುಷಿತಗೊಳ್ಳುತ್ತಿದೆ. ಪರಿಸರ ರಕ್ಷಣೆಯ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮಾತನಾಡಿ, ಯೋಗಾಭ್ಯಾಸದಿಂದ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ. ಇಂದು ಭಾರತೀಯ ಯೋಗಕ್ಕೆ ವಿಶ್ವ ಮನ್ನಣೆ ದೊರೆತಿರುವದು ಸಂತೋಷಕರ ವಿಚಾರ ಎಂದರು.

ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕರುಗಳಾದ ದೀಪಕ್ ಉಪಾಧ್ಯ ಮತ್ತು ಅಂಜನ್ ಅವರುಗಳು ಯೋಗದ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಆರ್ಟ್ ಆಫ್ ಲಿವಿಂಗ್‍ನ ಯೋಗ ಬಂಧುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷೆ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಆರ್ಟ್ ಆಫ್ ಲಿವಿಂಗ್‍ನ ಸಂಚಾಲಕಿ ರಾಗಿಣಿ, ಸಬ್‍ಇನ್ಸ್‍ಪೆಕ್ಟರ್ ಶಿವಣ್ಣ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಉಪಸ್ಥಿತರಿದ್ದರು. ಆರ್ಟ್ ಆಫ್ ಲಿವಿಂಗ್‍ನ ವಿಜಯ್ ಸ್ವಾಗತಿಸಿ, ರುಬೀನಾ ವಂದಿಸಿದರು.

ಕುವೆಂಪು ಶಾಲೆ

ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.

ಕುವೆಂಪು ಶಾಲೆ, ಆರ್ಟ್ ಆಫ್ ಲಿವಿಂಗ್ ಸಂಯುಕ್ತಾಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ನಾವು ವಿದ್ಯಾರ್ಥಿಗಳಾಗಿದ್ದಾಗ ಯೋಗ ಕಲಿತವನಿಗೆ ರೋಗವಿಲ್ಲ ಎಂದು ನಮ್ಮ ಶಿಕ್ಷಕರು ಹೇಳುತ್ತಿದ್ದರು. ಅದು ಸತ್ಯವೂ ಕೂಡ, ಪ್ರತಿಯೊಬ್ಬರೂ ಯೋಗ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಲಿತ ಯೋಗವನ್ನು 30 ನಿಮಿಷಗಳ ಕಾಲ ಪ್ರದರ್ಶಿಸಿ, ಅತಿಥಿಗಳು ಹಾಗೂ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕ ದೀಪಕ್ ಉಪಾಧ್ಯ ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಪ್ರಮುಖರು ಪಾಲ್ಗೊಂಡಿದ್ದರು.

*ನಿರಂತರ ಯೋಗ ಕೇಂದ್ರ, ರೋಟರಿ ಸಂಸ್ಥೆ ಹಾಗೂ ಜೇಸಿ ಸಂಸ್ಥೆ ಆಶ್ರಯದಲ್ಲಿ ಮಾನಸ ಹಾಲ್‍ನಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿನಿತ್ಯ ಯೋಗ ಮಾಡುವದರಿಂದ ದಿನವಿಡೀ ಚಟುವಟಿಕೆಯಿಂದ ಇರಬಹುದು ಎಂದರು.

ಕಾರ್ಯಕ್ರಮದಲ್ಲಿ ಆಲೂರು ಸಿದ್ದಾಪುರ ಆಸ್ಪತ್ರೆಯ ವೈದ್ಯಾಧಿಕಾರಿ ಸುಪರ್ಣಾ ಕೃಷ್ಣಾನಂದ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ರೋಟರಿ ನಿಯೋಜಿತ ಅಧ್ಯಕ್ಷ ಡಾ.ರಾಕೇಶ್ ಪಟೇಲ್, ಕಾರ್ಯದರ್ಶಿ ಪ್ರಕಾಶ್ ಕುಮಾರ್, ಯೋಗ ಗುರು ಕಿಬ್ಬೆಟ್ಟ ಗಣೇಶ್, ಪ್ರಮುಖರಾದ ಜ್ಯೋತಿ ಶುಭಾಕರ್, ಶೋಭ ಯಶವಂತ್, ನಾಗರಾಜ್, ದೇವರಾಜ್, ಲತಾನಾಗೇಶ್ ಇದ್ದರು.

ಕುಶಾಲನಗರ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕುಶಾಲನಗರದ ವಿವಿಧೆಡೆ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಹಾಗೂ ಕುಶಾಲನಗರ ಯೋಗ ಮಾರ್ಗ್ ಸಂಯುಕ್ತಾಶ್ರಯದಲ್ಲಿ 3ನೇ ವರ್ಷದ ವಿಶ್ವ ಯೋಗ ದಿನಾಚರಣೆ ನಡೆಯಿತು.

ಸ್ಥಳೀಯ ಉದ್ಯಮಿಗಳಾದ ಎಸ್.ಕೆ. ಸತೀಶ್ ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಂಜಾನೆ 5 ಗಂಟೆಯಿಂದ 7 ಗಂಟೆ ತನಕ ಯೋಗ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಮಧುಸೂದನ್, ಬಿ. ಅಮೃತ್‍ರಾಜ್ ಇದ್ದರು.

ಸೈನಿಕ ಶಾಲೆ: ಕೂಡಿಗೆ ಸೈನಿಕ ಶಾಲೆಯಲ್ಲಿ 600 ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಮತ್ತು 100 ಕ್ಕೂ ಅಧಿಕ ಸಿಬ್ಬಂದಿಗಳು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾ. ಆರ್.ಆರ್.ಲಾಲ್, ಉಪ ಪ್ರಾಂಶುಪಾಲರಾದ ಲೆ.ಕ. ಮನೀಷ ಶರ್ಮ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಮ್ಯಾಥ್ಯು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲ ಗ್ರೂಪ್. ಕ್ಯಾ. ಆರ್.ಆರ್.ಲಾಲ್, ಯೋಗ ಮೂಲಕ ಮಾನಸಿಕ, ಬೌದ್ಧಿಕ ಆರೋಗ್ಯ ವೃದ್ಧಿ ಸಾಧ್ಯ ಎಂದರು.

ಕಕ್ಕಬೆ: ನಾಪೆÉÇೀಕ್ಲು ಸಮೀಪದ ಕಕ್ಕಬೆ ಮುತ್ತವ್ವ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ನೇತೃತ್ವದಲ್ಲಿ ಕಕ್ಕಬ್ಬೆ ಸ್ಟೆಪ್ಸ್ ಸಂಸ್ಥೆಯ ಬೊಳಿಯಾಡಿರ ಸಂತು ಸುಬ್ರಮಣಿ ಸಹಯೋಗದೊಂದಿಗೆ ಯೋಗ ದಿನವನ್ನು ಆಚರಿಸಲಾಯಿತು. ಯೋಗ ಗುರು ಗುಡ್ಡೇರ ರಮೇಶ್ ಯೋಗದ ಬಗ್ಗೆ ತರಬೇತಿ ನೀಡಿದರು.

ಪಾಲಿಬೆಟ್ಟ: ದೇವರ ಅದ್ಭುತ ಸೃಷ್ಟಿಯಾದ ಮಾನವನ ದೇಹ ಮತ್ತು ಮನಸ್ಸನ್ನು ಸ್ವಚ್ಛವಾಗಿಡಲು ಯೋಗ ಅನಿವಾರ್ಯವೆಂದು ಕೊಡಗು ಶಿಕ್ಷಣ ನಿಧಿಯ ಅಧ್ಯಕ್ಷ ಕೆ.ಪಿ. ಉತ್ತಪ್ಪ ಅಭಿಪ್ರಾಯಪಟ್ಟರು. ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಅಂತರ್ರಾಷ್ಟ್ರೀಯ ಯೋಗಾ ದಿನಾಚರಣೆಯ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕೆ. ಪಿ. ಉತ್ತಪ್ಪ ಮಾತನಾಡಿ, ಆಧುನಿಕ ಯುಗದಲ್ಲಿ ಜನರು ಮಾನವ ನಿರ್ಮಿತ ಯಂತ್ರಗಳನ್ನು ಸ್ವಚ್ಛವಾಗಿಡುವದರಲ್ಲಿ ಮಗ್ನರಾಗಿ ತಮ್ಮ ಅಮೂಲ್ಯವಾದ ದೇಹ ಮತ್ತು ಮನಸ್ಸನ್ನು ಸ್ಚಚ್ಛವಾಗಿಡುವದರ ಕಡೆ ಗಮನ ಹರಿಸುತ್ತಿಲ್ಲ. ಇದರ ಪರಿಣಾಮವಾಗಿ ಅನೇಕ ಖಾಯಿಲೆಗಳು ಮನುಷ್ಯನನ್ನು ಕಾಡುತ್ತಿದೆ. ಪ್ರತಿನಿತ್ಯ ಪ್ರತಿಯೊಬ್ಬರೂ ಯೋಗವನ್ನು ಮಾಡಿದರೆ ಖಾಯಿಲೆಯಿಂದ ದೂರವಿದ್ದು, ಶಾಂತಿ ಸಂತೋಷದಿಂದ ಬದುಕಬಹುದೆಂದರು.

ಎನ್.ಎಸ್.ಎಸ್. ಘಟಕದ ವಾರ್ಷಿಕ ಚಟುವಟಿಕೆಯನ್ನು ದೀಪ ಬೆಳಗಿಸಿ, ಸಸಿ ನೆಡುವದರ ಮೂಲಕ ಉದ್ಘಾಟನೆ ಮಾಡಿದ ಸಿದ್ದಾಪುರ ಠಾಣೆಯ ಎ.ಎಸ್.ಐ. ವಸಂತ್ ಕುಮಾರ್, ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಎನ್.ಎಸ್.ಎಸ್. ವೇದಿಕೆಯಾಗಲಿದೆ ಎಂದರು.

ಕಾಲೇಜಿನ ಎನ್.ಎಸ್.ಎಸ್. ಘಟಕ ಹಮ್ಮಿಕೊಂಡಿದ್ದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯೋಗಪಟು ಗುರುರಾಜ್ ಭಟ್ ಹಾಗೂ ಸಮಾಜ ಸೇವಕ ಮಧು ಪಾಲಿಬೆಟ್ಟ ಶಿಕ್ಷಣ ಸಮುಚ್ಛಯದಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧತಟಿ ಚಕ್ರಾಸನ, ಪಾಶ್ರ್ವಕೋನಾಸನ, ತ್ರಿಕೋನಾಸನ ಹಾಗೂ ಸೂರ್ಯ ನಮಸ್ಕಾರವನ್ನು ಕಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಎಂ. ಭವಾನಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪರಿಸರವನ್ನು ಸ್ವಚ್ಛ ಮಾಡುವದರೊಂದಿಗೆ ತಮ್ಮ ಶರೀರ ಹಾಗೂ ಮನಸ್ಸನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದರು.

ತಸ್ಲೀನ ಮತ್ತು ಚೈತ್ರ ಪ್ರಾರ್ಥಿಸಿದರು, ಉಪನ್ಯಾಸಕ ಪಿ.ಆರ್. ಶಿವದಾಸ್ ಸ್ವಾಗತಿಸಿದರು. ಕೆ.ಕೆ. ಸುನಿತ ಕಾರ್ಯಕ್ರಮ ನಿರೂಪಿಸಿದರೆ, ಉಪನ್ಯಾಸಕಿ ಎಂ.ಬಿ. ಪಾರ್ವತಿ ವಂದಿಸಿದರು.

ಕೂರ್ಗ್ ಪಬ್ಲಿಕ್ ಶಾಲೆ

*ಗೋಣಿಕೊಪ್ಪಲು: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಎನ್‍ಸಿಸಿ ಕೆಡೆಟ್‍ಗಳು ಅಂತÀರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು. ಶಾಲೆಯ ಒಳಾಂಗಣದಲ್ಲಿ ನಡೆದ ದಿನಾಚರಣೆಯಲ್ಲಿ ಸ್ಥಳೀಯ ಕಾವೇರಿ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದರು.

ಕೂರ್ಗ್ ಪಬ್ಲಿಕ್ ಸ್ಕೂಲ್‍ನ ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಬಿ.ಎಂ. ಗಣೇಶ್, ಕಾವೇರಿ ಕಾಲೇಜಿನ ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಬ್ರೈಟ್ ಕುಮಾರ್ ಮತ್ತು ಲೆಫ್ಟಿನೆಂಟ್ ಡಾ. ಬೀನಾ ಯೋಗದ ಮಹತ್ವವನ್ನು ವಿವರಿಸಿದರು. ಯೋಗ ಶಿಕ್ಷಕಿ ಮಂತವ್ವ ಅಂಗಡಿ ಯೋಗಭ್ಯಾಸ ಮಾಡಿಸಿದರು. ಮಡಿಕೇರಿಯಿಂದ ಆಗಮಿಸಿದ 19ನೇ ಎನ್‍ಸಿಸಿ ಬೆಟಾಲಿಯನ್ ಅಧಿಕಾರಿ ಕುಮಖ್ ಥಾಫ ಮೇಲ್ವಿಚಾರಕರಾಗಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಯೋಗ ನಡೆಸಲಾಯಿತು. ಸಿಆರ್‍ಪಿ ಜೀವನ್, ಮುಖ್ಯ ಶಿಕ್ಷಕ ರವೀಶ್, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಹಾಜರಿದ್ದರು.

ಪೊನ್ನಂಪೇಟೆ: ರಾಮಕೃಷ್ಣ ಶಾರದಾಶ್ರಮ ಹಾಗೂ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಹಯೋಗದಲ್ಲಿ ಜೂನಿಯರ್ ಕಾಲೇಜು ಟರ್ಫ್ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡರು.

ಸಿಐಟಿ ಕಾಲೇಜು ಹಾಗೂ ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡರು. ಯೋಗ ತರಬೇತುದಾರರುಗಳಾದ ಡಾ. ಅಲ್ಲಮ ಪ್ರಭು ಹಾಗೂ ಡಾ. ಮಾನಸ ಇವರುಗಳು ಯೋಗದ ಮಹತ್ವವನ್ನು ಪ್ರದರ್ಶನದ ಮೂಲಕ ನೀಡಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಶ್ರೀ ಬೋಧ ಸ್ವರೂಪ ನಂದಾಜಿ ಮಾತನಾಡಿ, ಮಾನವನ ಬದುಕಿನಲ್ಲಿ ಸಾಧನೆಗಳು ನೆರವೇರಬೇಕೆಂದರೆ ಯೋಗಭ್ಯಾಸ ಮಾಡಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ಶ್ವಾಸಕೋಶ ಹಾಗೂ ದೇಹದ ಇನ್ನಿತರ ರೋಗಗಳ ನಿಯಂತ್ರಣಕ್ಕೆ ಯೋಗ ಅವಶ್ಯಕ.