ಮಡಿಕೇರಿ, ಜೂ. 21: ಕೊಡಗಿನಿಂದ ವಿದೇಶಕ್ಕೆ ಹೋಗಿ ಅಲ್ಲಿ ಸಿಗಬಹುದಾದ ಹೆಚ್ಚಿನ ಮೊತ್ತದ ಸಂಬಳ ಹಣದಿಂದ ಭವಿಷ್ಯದಲ್ಲಿ ಸುಖಕರ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಮಲೇಷಿಯಾದ ಕೌಲಲಾಂಪುರಕ್ಕೆ ವಿಮಾನದಲ್ಲಿ ತೆರಳಿ, ಅಲ್ಲಿ ಸಿಲುಕಿಕೊಂಡು ಪಾಡುಪಟ್ಟದ್ದನ್ನು ನೆನೆಸಿಕೊಂಡರೆ, ಜೀವನದಲ್ಲಿ ಇನ್ನೆಂದಿಗೂ ಅತ್ತ ತಲೆಹಾಕಿಯೂ ಮಲಗಲಾರೆ ಎಂಬ ನಿರ್ಧಾರಕ್ಕೆ ಪುರುಷೋತ್ತಮ ಹಾಗೂ ಚೆಲುವರಾಜ್ ಬಂದು ಬಿಡುತ್ತಾರೆ!

(ಮೊದಲ ಪುಟದಿಂದ) ಆದರೆ ಇವರಿಬ್ಬರನ್ನು ಮಲೇಷಿಯಾಕ್ಕೆ ಕಳುಹಿಸಿಕೊಟ್ಟಿದ್ದ ಸುಳ್ಯದ ಜಾಕೀರ್‍ಹುಸೇನ್ ಮಾತ್ರ ಇಲ್ಲಿ ಹೇಳುವದೇ ಬೇರೆ. ಈತನ ಪ್ರಕಾರ ಪುರುಷೋತ್ತಮನಿಗೆ ವಿದೇಶ ಪ್ರವಾಸ ಹೊಸತಲ್ಲ, ಬದಲಾಗಿ ಈ ಹಿಂದೆಯೂ ಆತ ದುಬೈ (ಗಲ್ಫ್)ನಲ್ಲಿ ಮೂರು ವರ್ಷ ಕೆಲಸದಲ್ಲಿ ಇದ್ದು ಹಿಂತಿರುಗಿ ಭಾಗಮಂಡಲಕ್ಕೆ ಬಂದಿದ್ದಾನೆ.

ಅಲ್ಲದೆ, ಈ ಅನುಭವದಿಂದಲೇ ಮತ್ತೊಮ್ಮೆ ತಾನು ಹಾಂಗ್‍ಕಾಂಗ್‍ನಲ್ಲಿ ಉದ್ಯೋಗಕ್ಕೆ ಹೋಗುವ ಅಪೇಕ್ಷೆಯಿಂದ ನಾಲ್ಕೈದು ತಿಂಗಳ ಹಿಂದೆ ಸುಳ್ಯದಲ್ಲಿನ ಜಾಕೀರ್ ಹುಸೇನ್‍ನನ್ನು ಭಾಗಮಂಡಲದ ವಿದ್ಯಾರ್ಥಿಯೊಬ್ಬನ ಮೂಲಕ ಸಂಪರ್ಕಿಸುತ್ತಾನೆ. ತನಗೆ ಹಾಂಗ್‍ಕಾಂಗ್‍ಗೆ ತೆರಳಲು ವ್ಯವಸ್ಥೆ ಯೊಂದಿಗೆ ಅಲ್ಲೊಂದು ಉದ್ಯೋಗ ಕೊಡಿಸಲು ಕೇಳಿಕೊಂಡಿದ್ದಾನೆ.

ವಿದೇಶದಲ್ಲಿ ಉದ್ಯೋಗ ದೊಂದಿಗೆ ಹಣ ಸಂಪಾದಿಸುವ ಜಾಲದ ಸಂಪರ್ಕದಲ್ಲಿರುವ ಜಾಕೀರ್‍ಹುಸೇನ್ ಹಾಗೂ ಪುರುಷೋತ್ತಮ ನಡುವೆ ಒಡಂಬಡಿಕೆಯ ಮಾತುಕತೆ ನಡೆಯುತ್ತದೆ. ಆ ಪ್ರಕಾರ ರೂಪಾಯಿ ಎರಡು ಲಕ್ಷದಷ್ಟು ಹಣ ಕೂಡ ವಿನಿಮಯ ಮಾಡಿಕೊಳ್ಳುತ್ತಾರೆ. ಒಂದೆರಡು ತಿಂಗಳ ಬಳಿಕ ಈ ಪುರುಷೋತ್ತಮನಿಗೆ ಹಾಂಗ್‍ಕಾಂಗ್‍ಗೆ ತೆರಳಲು ಬೇಕಾದ ‘ವೀಸಾ’ ಇತ್ಯಾದಿಯೊಂದಿಗೆ ಜಾಕೀರ್‍ಹುಸೇನ್ ವಿಮಾನ ಟಿಕೆಟ್ ಕೂಡ ಸಿದ್ಧಪಡಿಸಿ ಮೊಬೈಲ್ ಸಂದೇಶ ರವಾನಿಸುತ್ತಾನೆ. ಇತ್ತ ನಿಗದಿತ ದಿನದಂದು ಹಾಂಗ್‍ಕಾಂಗ್‍ಗೆ ತೆರಳಲು ಸಿದ್ಧನಾಗಿ ಬರುವ ಭಾಗಮಂಡಲದ ಪುರುಷೋತ್ತಮನನ್ನು ಸುಳ್ಯದ ಜಾಕೀರ್ ಚೆನ್ನೈಗೆ ತೆರಳುವಂತೆ ಹೇಳಿ ಕಳುಹಿಸಿಕೊಟ್ಟಿದ್ದಾಗಿ ಮಾಹಿತಿ ನೀಡುತ್ತಾನೆ.

ಆತನ ಮೂಲಕವೇ ಚೆನ್ನೈನಲ್ಲಿ ಇದೇ ಸುಳ್ಯ ತಾಲೂಕಿನ ಅಜ್ಜಾವರದ ಹರೀಶ್ ಎಂಬಾತ ಸಂಪರ್ಕಕ್ಕೆ ಬರುತ್ತಾನೆ. ಇಲ್ಲಿಯೂ ಬಹುಶಃ ಹಾಂಗ್‍ಕಾಂಗ್‍ಗೆ ತೆರಳಲು ಏಕಮುಖ ಪ್ರಯಾಣ ಟಿಕೆಟ್ ಪುರುಷೋತ್ತಮನಿಗೆ ಲಭಿಸಿರುವ ಸಂಶಯವಿದೆ. ಅಲ್ಲದೆ ವಿಸಿಟಿಂಗ್ ‘ವೀಸಾ’ ಸಿಕ್ಕಿರುವ ಗುಮಾನಿ ಇದೆ. ಹೀಗಾಗಿ ಹಾಂಗ್‍ಕಾಂಗ್ ವಿಮಾನ ಏರುವ ಬದಲು ಪುರುಷೋತ್ತಮ ತನ್ನ ಪಯಣವನ್ನು ಮೊಟಕುಗೊಳಿಸಿ ಕಡೆಯ ಗಳಿಗೆಯಲ್ಲಿ ಚೆನ್ನೈನಿಂದ ಹಿಂತಿರುಗಿ ಬಂದು ಬಿಡುತ್ತಾನೆ. ಇಲ್ಲಿ ಜಾಕೀರ್‍ಹುಸೇನ್ ಹಾಗೂ ಪುರುಷೋತ್ತಮ ನಡುವೆ ಸಂಶಯ ಹುಟ್ಟಿಕೊಂಡಿದೆ. ಬಹುಶಃ ಮೊದಲೇ ಮೂರು ವರ್ಷ ವಿದೇಶದಲ್ಲಿ (ಗಲ್ಫ್) ಉದ್ಯೋಗದಲ್ಲಿದ್ದು, ಬಂದಿದ್ದರಿಂದ ವಿದೇಶ ಪ್ರಯಾಣದ ನಿಯಮಗಳ ಅನುಭವ ಇದ್ದುದರಿಂದ ಹಾಂಗ್‍ಕಾಂಗ್‍ಗೆ ಹೋಗಿ, ಮೋಸದ ಬಲೆಯಲ್ಲಿ ಸಿಲುಕುವ ಅಪಾಯ ದಿಂದಲೇ ಈತ ಚೆನ್ನೈನಿಂದ ಮರಳಿರುವ ಗುಮಾನಿ ಹುಟ್ಟಿಕೊಳ್ಳುತ್ತದೆ.

ಅಂತು ಹಿಂತಿರುಗಿ ಬಂದ ಪುರುಷೋತ್ತಮ ಜಾಕೀರ್ ಹುಸೇನ್‍ನಿಂದ ತಾನು ನೀಡಿದ್ದ ಹಣವನ್ನು ಹಿಂತಿರುಗಿಸುವಂತೆ ಬೇಡಿಕೆ ಇಡುತ್ತಾನಂತೆ. ಇಲ್ಲಿ ಜಾಕೀರ್‍ಹುಸೇನ್ ಕೂಡ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತಾನು ಪಡೆದಿದ್ದ ರೂ. 2ಲಕ್ಷ ಮೊತ್ತದಲ್ಲಿ ಪುರುಷೋತ್ತಮನಿಗಾಗಿ ಕಾಯ್ದಿರಿಸಿದ್ದ ಹಾಂಗ್‍ಕಾಂಗ್ ಟಿಕೆಟ್ ಖರ್ಚು, ವೀಸಾ ಇತ್ಯಾದಿ ಸೇರಿದಂತೆ ಚೆನ್ನೈ ಪ್ರವಾಸ ವೆಚ್ಚವೆಲ್ಲವನ್ನು ಕಳೆದು ಒಂದಿಷ್ಟು ಹಣವನ್ನು ಹಿಂತಿರುಗಿಸಿದ್ದಾಗಿ ಹೇಳುತ್ತಿದ್ದಾನೆ.

ತಿರುವು ಪಡೆಯಿತು: ಈ ಹಂತದವರೆಗೆ ಸುಳ್ಯದ ಜಾಕೀರ್‍ಹುಸೇನ್ ಹಾಗೂ ಭಾಗಮಂಡಲ ಪುರುಷೋತ್ತಮ ನಡುವೆ ಇದ್ದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು, ಪ್ರಸಕ್ತ ಇವರಿಬ್ಬರು ಒಬ್ಬರನೊಬ್ಬರು ನಿಂದಿಸಿಕೊಳ್ಳುತ್ತಾ ವಿಭಿನ್ನ ಕಥೆ ಹೆಣೆಯ ತೊಡಗಿದ್ದಾರೆ. ಅಲ್ಲದೆ ಇಲ್ಲಿ ಈ ಉದ್ಯೋಗದ ಆಶಯ ಹೊತ್ತು ವಿದೇಶಕ್ಕೆ ಹಾರಿದವರ ಜಾಲದ ಹಿಂದಿರುವ ರಹಸ್ಯ ತಿರುವು ಪಡೆದುಕೊಳ್ಳಲಿದೆ.

-ಶ್ರೀಸುತ