ಸೋಮವಾರಪೇಟೆ, ಮಾ.25: ಅಭಿವೃದ್ಧಿ, ಸಮಾನತೆ, ರೈತರ ಶ್ರೇಯೋಭಿವೃದ್ದಿಯೊಂದಿಗೆ ರಾಜ್ಯದ ಉಳಿವಿಗಾಗಿ ಜಾತ್ಯತೀತ ಜನತಾದಳ ಅಧಿಕಾರಕ್ಕೇರುವದು ಅನಿವಾರ್ಯ ವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಬೇಕು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಪಣತೊಡಬೇಕು ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳು ರೈತರ ಹಿತವನ್ನು ಮರೆತಿವೆ. ರಾಜ್ಯದಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗುತ್ತಿದೆ. ಅಭಿವೃದ್ಧಿ ಮರೆತ ಸರ್ಕಾರ ಕಾಲಹರಣದಲ್ಲಿ ಮುಳುಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕು ಎಂದು ಕರೆ ನೀಡಿದರು.
ಇದೀಗ ಚುನಾವಣೆ ಎದುರಾಗುತ್ತಿದ್ದು, ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
(ಮೊದಲ ಪುಟದಿಂದ) ಮಾಜೀ ಸಚಿವ, ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಮಾತನಾಡಿ, ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಬಲ ಕುಗ್ಗಿಸಲು ರಾಷ್ಟ್ರೀಯ ಪಕ್ಷಗಳು ಕುತಂತ್ರ ನಡೆಸುತ್ತಿವೆ. ಈ ಬಗ್ಗೆ ಕಾರ್ಯಕರ್ತರು ಜಾಗ್ರತೆವಹಿಸಬೇಕು ಎಂದರು.
ಕೊಡಗಿನಲ್ಲಿ ಕಾಫಿ ಫಸಲು ಹಾಗೂ ಬೆಲೆ ಕುಸಿಯುತ್ತಿದೆ. ಭವಿಷ್ಯದ ಬಗ್ಗೆಯೂ ಆತಂಕ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಇವರ ನೆರವಿಗೆ ಧಾವಿಸುತ್ತಿಲ್ಲ ಎಂದರು.
ಜೆಡಿಎಸ್ ಮಾಜೀ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ಮಾತನಾಡಿ, ಈ ಕ್ಷೇತ್ರವನ್ನು ಕಳೆದ 20 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಶಾಸಕರು ಯಾವದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯ ರಸ್ತೆಗಳು ದುಸ್ಥಿತಿಗೆ ತಲುಪಿವೆ. ಕಳೆದ ಬಾರಿ 1800 ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು, ಅನುದಾನ ಎಲ್ಲಿಗೆ ಹೋಗಿದೆ ಎಂಬದನ್ನು ತಿಳಿಸಲಿ ಎಂದರು.
ಪಕ್ಷದ ಕೊಡಗು ಉಸ್ತುವಾರಿ ವಿ.ಎಂ. ವಿಜಯ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಗೆ ಕಾಂಗ್ರೆಸ್ ಸರ್ಕಾರ ಯಾವದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧ್ಯಯನ ನಡೆಸಿಲ್ಲ. ಕೇಂದ್ರದಿಂದಲೂ ರೈತರ ರಕ್ಷಣೆಯಿಲ್ಲ ಎಂದರು.
ಜೆಡಿಎಸ್ ಮುಖಂಡ ಮನೋಜ್ ಬೋಪಯ್ಯ ಮಾತನಾಡಿ, ತಮ್ಮ ಪಕ್ಷದ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕುಶಾಲನಗರ ತಾಲೂಕು ರಚನೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರೇ ಪ್ರತಿಭಟನೆ ನಡೆಸುತ್ತಿರುವದು ಹಾಸ್ಯಾಸ್ಪದ ಎಂದರು.
ಸಭೆಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಜೆಡಿಎಸ್ ಮುಖಂಡ ಮಹದೇವ್, ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್‍ಗೌಡ, ಜೆಡಿಎಸ್ ಮುಖಂಡರಾದ ಹೆಚ್.ಬಿ. ಜಯಮ್ಮ ಸೇರಿದಂತೆ ಇತರರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು, ಯುವ ಜನತಾದಳ ಅಧ್ಯಕ್ಷ ಅಜೀಶ್‍ಕುಮಾರ್, ರಾಜ್ಯ ಸಮಿತಿ ಸದಸ್ಯ ಷರೀಫ್, ತಾಲೂಕು ಯುವ ಜನತಾದಳದ ಅಧ್ಯಕ್ಷ ಸಿ.ಎಲ್. ವಿಶ್ವ, ಅಲ್ಪಸಂಖ್ಯಾತ ಘಟಕದ ಆದಿಲ್‍ಪಾಷ, ತಾ.ಪಂ. ಸದಸ್ಯೆ ಕುಸುಮಾವತಿ ಮೊದಲಾದವರು ಉಪಸ್ಥಿತರಿದ್ದರು.