ಕುಶಾಲನಗರ, ಮಾ. 3: ರೂ. 500, 1000 ಮುಖಬೆಲೆಯ ನೋಟುಗಳ ಅಮಾನ್ಯಕರಣ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಜನ ವೇದನಾ ಜನಾಂದೋಲನ ಕಾರ್ಯಕ್ರಮ ತಾ. 4 ರಂದು (ಇಂದು) ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಯಾವದೇ ಪೂರ್ವಭಾವಿ ತಯಾರಿ ಇಲ್ಲದೆ ಹಠಾತ್ತನೆ ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಪರಿಣಾಮ ಸಾಮಾನ್ಯ ಜನರು ಬವಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರಂಭದಲ್ಲಿ ಮೋದಿ ಸರಕಾರ ದೇಶದ ಒಳಿತಿಗಾಗಿ ಕೈಗೊಂಡಿರುವ ಈ ಕ್ರಮವನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸಿತ್ತು. ಆದರೆ ನೋಟುಗಳ ಅಮಾನ್ಯಕರಣದಿಂದ ದೇಶದ ಜನತೆ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತೇ ಹೊರತು ಇದರಿಂದ ದೇಶಕ್ಕೆ ಯಾವದೇ ರೀತಿಯ ಪ್ರಯೋಜನ ಉಂಟಾಗಿಲ್ಲ.

ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟಗಳನ್ನು ತೆರೆದಿಡುವ ನಿಟ್ಟಿನಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನ ವೇದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮ ಸಂಜೆ 4 ಗಂಟೆಗೆ ಕುಶಾಲನಗರದ ಕಾರು ನಿಲ್ದಾಣದ ಬಹಿರಂಗ ವೇದಿಕೆಯಲ್ಲಿ ನಡೆಯಲಿದ್ದು, ಬೈಚನಹಳ್ಳಿಯ ಮಾರಮ್ಮ ದೇವಾಲಯದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಗುವದು ಎಂದು ತಿಳಿಸಿದರು.

ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ನೋಟು ಅಮಾನ್ಯಕರಣ ದಿಂದ ಉಂಟಾಗಿರುವ ಒಳಿತು-ಕೆಡುಕುಗಳ ಬಗ್ಗೆ ಜನಸಾಮಾನ್ಯರ ಅಭಿಪ್ರಾಯಗಳನ್ನು ತೆರೆದಿಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹುಸೇನ್, ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಪಕ್ಷದ ರಾಜ್ಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ವಿ.ಪಿ. ಶಶಿಧರ್, ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಮಾಜಿ ಸದಸ್ಯರಾದ ಅಬ್ದುಲ್ ಖಾದರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಪ್ರಮುಖರಾದ ಎಂ.ಎಂ. ಪ್ರಕಾಶ್, ಹರೀಶ್ ಇದ್ದರು.