ಸೋಮವಾರಪೇಟೆ, ಮಾ. 3: ಸ್ವಚ್ಛ ಭಾರತ್ ಅಭಿಯಾನದ ಪ್ರಚಾರ ಫಲಕ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹಲವಷ್ಟು ಕಡೆಗಳಲ್ಲಿ ಕಂಡುಬರುತ್ತಿದ್ದರೂ ಸ್ವಚ್ಛತೆ ಮಾತ್ರ ಕಾಣುತ್ತಿಲ್ಲ. ಪಟ್ಟಣದ ಹಲವು ಕಡೆಗಳಲ್ಲಿ ಚರಂಡಿ ತ್ಯಾಜ್ಯ ರಸ್ತೆಯ ಮೇಲೆ ಹರಿಯುತ್ತಿದ್ದು, ಜನಸಸಾಮಾನ್ಯರಿಗೆ ಕೊಳಚೆಯ ಸಿಂಚನ ಮಾಮೂಲಿಯಂತಾಗಿದೆ.

ಪ.ಪಂ. ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ಕುರುಚಲು ಗಿಡಗಳು ಬೆಳೆದಿದ್ದು, ತ್ಯಾಜ್ಯದಿಂದ ತುಂಬಿದೆ. ಪರಿಣಾಮ ರಸ್ತೆಯ ಮೇಲೆ ತ್ಯಾಜ್ಯ ನೀರು ತುಂಬಿ ಹರಿಯುತ್ತಿದ್ದು, ವಾಹನಗಳು ಚಲಿಸುವ ಸಂದರ್ಭ ತ್ಯಾಜ್ಯ ನೀರನ್ನು ಸಾರ್ವಜನಿಕರ ಮೈಮೇಲೆ ಹಾರಿಸುತ್ತಿದೆ. ಗಬ್ಬೆದ್ದು ನಾರುತ್ತಿರುವ ಕೊಳಚೆಯನ್ನು ವಿಲೇವಾರಿ ಮಾಡುವಲ್ಲಿ ಪ.ಪಂ. ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಬ್ಲಾಕ್‍ನಲ್ಲಿ ಚರಂಡಿ ತುಂಬಿ ಕಳೆದ 15 ದಿನಗಳಿಂದ ರಸ್ತೆಯಲ್ಲಿ ಜನರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಗಬ್ಬೆದ್ದು ನಾರುತ್ತಿರುವ ತ್ಯಾಜ್ಯವನ್ನು ತುಳಿದುಕೊಂಡು ಮಕ್ಕಳು ಸೇರಿದಂತೆ ಜನರು ತಿರುಗಬೇಕಿದೆ ಎಂದು ಆರೋಪಿಸಿರುವ ಸ್ಥಳೀಯರು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಬಾಣಾವರ ರಸ್ತೆ ಮೂಲಕ ಮಸಗೋಡು ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯಲ್ಲಿಯೂ ತ್ಯಾಜ್ಯದ ಕೊಳಚೆ ನೀರು ಹರಿಯುತ್ತಿದೆ. ಬಿಎಸ್‍ಎನ್‍ಎಲ್ ಟವರ್ ಮುಂಭಾಗ ವಾರ್ಡ್ 2 ರಲ್ಲಿರುವ ಬಾಣಾವರ ರಸ್ತೆ ನಿವಾಸಿಗಳ ಮನೆಯಿಂದ ಹೊರಬರುವ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ಮೂಗು ಮುಚ್ಚಿಕೊಂಡು ಸಂಚರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‍ನ ಸದಸ್ಯರು ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.