ಮಡಿಕೇರಿ, ಮಾ.3 :ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಯ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾ.6 ರಂದು ಭಾಗಮಂಡಲದಲ್ಲಿ ‘ಜನವೇದನಾ ಸಮಾವೇಶ’ ನಡೆಯಲಿದೆ ಎಂದು ್ಲ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ಬಿಜೆಪಿ ನೀಡಿದ್ದ ಭರವಸೆಗಳು ಹುಸಿಯಾಗಿದ್ದು, ಭ್ರಮೆಯನ್ನು ಹುಟ್ಟು ಹಾಕುವ ಮೂಲಕ ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು. ಮೋದಿ ಅವರ ‘ಅಚ್ಛೇ ದಿನ್ ಆಯೇಗ’ ಎನ್ನುವದು ಬಡವರ್ಗಕ್ಕಾಗಲಿ, ರೈತ ಸಮುದಾಯ ಕ್ಕಾಗಲಿ ಬಂದಿಲ್ಲ. ಬದಲಾಗಿ ಅದು ಬಿಜೆಪಿಗೆ ಮತ್ತು ಮೋದಿಯವರಿಗಷ್ಟೇ ಬಂದಿದೆ ಎಂದು ವ್ಯಂಗ್ಯವಾಡಿದರು.

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಎಂಎಲ್‍ಸಿ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ಕೆಪಿಸಿಸಿ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಮಿಟ್ಟು ಚಂಗಪ್ಪ, ಕೆಪಿಸಿಸಿಯ ಜಿಲ್ಲಾ ಉಸ್ತುವಾರಿ ಹುಸೇನ್, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಎಐಸಿಸಿಯ ಉಷಾ ನಾಯ್ಡು ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪ್ರಮುಖರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮಖರಾದ ಸುನಿಲ್ ಪತ್ರಾವೋ, ಪ್ರಕಾಶ್, ಹ್ಯಾರಿಸ್ ಉಪಸ್ಥಿತರಿದ್ದರು.