ಕುಶಾಲನಗರ/ಕೂಡಿಗೆ, ಮೇ 7: ಹಾರಂಗಿ ಯೋಜನಾ ವೃತ್ತದಲ್ಲಿ ಒಟ್ಟು ರೂ. 300 ಕೋಟಿ ವೆಚ್ಚದ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಅತಿಥಿಗೃಹದಲ್ಲಿ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಅವರು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಮಾಹಿತಿ ಒದಗಿಸಿದರು.

ಹಾರಂಗಿ ಬಲದಂಡೆ ನಾಲೆ ಅಭಿವೃದ್ಧಿಗೆ 73 ಕೋಟಿ ವೆಚ್ಚದಲ್ಲಿ ಮತ್ತು ಎಡದಂಡೆ ನಾಲೆಗೆ ರೂ. 116 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹುಣಸೂರು ವಿಭಾಗದಲ್ಲಿ ಹನಗೋಡು ನಾಲೆ ಅಭಿವೃದ್ಧಿಗೆ ರೂ. 135 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು. ಹಾರಂಗಿ ಜಲಾಶಯ ಆವರಣದಲ್ಲಿ ಉದ್ಯಾನವನ ನಿರ್ಮಾಣಗೊಂಡಿದ್ದು ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನವನ್ನೊಳಗೊಂಡ ಕಾರಂಜಿ ನಿರ್ಮಾಣಕ್ಕೆ ರೂ. 2.3 ಕೋಟಿ ಒದಗಿಸಲಾಗಿದೆ ಎಂದರು.

ಮೈಸೂರು ಕೃಷ್ಣರಾಜಸಾಗರ ಉದ್ಯಾನವನ ಮಾದರಿಯಲ್ಲಿ ಹಾರಂಗಿಯನ್ನು ಮೇಲ್ದರ್ಜೆಗೆ ಏರಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದ್ದು ಜೂನ್ 17ರ ಅಂತಿಮ ಗಡುವು ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಇದರೊಂದಿಗೆ ಯಡವನಾಡು ಹಾರಂಗಿ ಸಂಪರ್ಕ ರಸ್ತೆಗೆ ರೂ. 1.2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವದು. ಜಲಾಶಯದ ನಿರ್ವಹಣೆಗೆ ಈಗಾಗಲೆ ಕ್ರಿಯಾ ಯೋಜನೆ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಹಾರಂಗಿ ಜಲಾಶಯ ಆವರಣದಲ್ಲಿ ಆಧುನಿಕ ವಿನ್ಯಾಸದೊಂದಿಗೆ ಸಕ್ರ್ಯೂಟ್ ಹೌಸ್ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ರೂ. 4.8 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಹಾರಂಗಿ ಜಲಾಶಯದ ನಿರ್ವಹಣೆ ಕುಂಠಿತಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ನಿಟ್ಟಿನಲ್ಲಿ ಹಾರಂಗಿ ಅಣೆಕಟ್ಟೆ ಉಸ್ತುವಾರಿ ಹೊತ್ತಿರುವ ಕಚೇರಿಯನ್ನು ಕುಶಾಲನಗರದಿಂದ ಅಣೆಕಟ್ಟೆ ಸಮೀಪದ ಕಚೇರಿ ಸಮುಚ್ಚಯಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಭಾಗಮಂಡಲ ಮೇಲ್ಸೇತುವೆ: ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಈ ಸಾಲಿನಲ್ಲಿ ಪ್ರಾರಂಭಗೊಳ್ಳಲಿದೆ. ರೂ. 24 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಗೆ ಸರಕಾರ ಅನುಮೋದನೆ ನೀಡಿದ್ದು ಸಧ್ಯದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಜೀವನದಿ ಕಾವೇರಿ ಹಾಗೂ ಹಾರಂಗಿ, ಚಿಕ್ಲಿಹೊಳೆ ನದಿ ಸಂರಕ್ಷಣೆ ನಿಟ್ಟಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧ ಶಾಶ್ವತ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಮಗ್ರ ವರದಿ ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುವದು ಎಂದರು.

ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಹಾರಂಗಿ ಯೋಜನಾ ವೃತ್ತದ ಮುಖ್ಯ ಅಧೀಕ್ಷಕ ಬಿ. ಶಿವಶಂಕರ್, ಅಧೀಕ್ಷಕ ಅಭಿಯಂತರ ಮಹೇಶ್, ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು, ಹಾರಂಗಿ ಯೋಜನಾ ವೃತ್ತದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಚೌಡೇಗೌಡ, ಜನಪ್ರತಿನಿಧಿಗಳು ಹಾಗೂ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಇದ್ದರು.