ಮಡಿಕೇರಿ, ಮೇ 4: ಕೆಲವು ವರ್ಷಗಳಿಂದ ಕಾವೇರಿಯ ದಿವ್ಯ ಸನ್ನಿಧಿಯಲ್ಲಿ ಅನಾಚಾರ, ಅಪವಿತ್ರತೆ ಹಾಗೂ ವ್ಯಾಪಾರೀಕರಣ ಪ್ರಾರಂಭ ವಾಗುವ ಮೂಲಕ ಅಪವಿತ್ರಗೊಳ್ಳುತ್ತಿದೆ. ಈ ಕಾರಣಗಳಿಂದಾಗಿ ಮಾತೆ ಕಾವೇರಿಯು ಕೊಡಗಿನ ಜನರ ಹಾಗೂ ಅವರನ್ನು ಅವಲಂಭಿತರ ಬಗ್ಗೆ ಕೋಪಗೊಂಡಿರುವದು ಗೊತ್ತಾಗಿರುತ್ತದೆ. ಇದಕ್ಕೆ ಸಾಕ್ಷಿಯಾಗಿ ಕೊಡಗಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾವೇರಿ ಕುಂಡಿಕೆಯಲ್ಲಿನ ತೀರ್ಥ ಕಡಿಮೆ ಯಾಗಿರುವದು ಸಾಕ್ಷಿ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹೇಳಿದ್ದಾರೆ.

ಕಾವೇರಿ ಮಾತೆಯು ಅಗಸ್ತ್ಯ ಋಷಿಯ ಮಡದಿಯಾಗಿ, ಅಗಸ್ತ್ಯ ಋಷಿಯು ಕೊಟ್ಟ ಮಾತಿಗೆ ತಪ್ಪಿರುವದರಿಂದ ಜಲ ರೂಪಿಣಿಯಾಗಿ ಅವತಾರತಾಳಿ ತೀರ್ಥ ರೂಪಿಣಿಯಾಗಿ ಪರಿವರ್ತನೆಗೊಂಡಳು. ಆದರೆ ಪವಿತ್ರ ಕ್ಷೇತ್ರವು ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ಬರುವದರಿಂದ ಪ್ರವಾಸಿಗರು ಇಚ್ಛಾನುಸಾರವಾಗಿ ಬಂದು ಬ್ರಹ್ಮಗಿರಿ ಬೆಟ್ಟದ ಮೇಲೆ ಮೋಜು-ಮಸ್ತಿಗಳನ್ನು ನಡೆಸಿಕೊಂಡು ಬ್ರಹ್ಮಗಿರಿಯ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುತ್ತಾರೆ. ಅಗಸ್ತ್ಯ ಋಷಿಗಳು, ಕವೇರ ಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿ ತೀರ್ಥ ಕುಂಡಿಕೆಯು ಕೂಡ ಈಗ ಕಾಣೆಯಾಗಿದೆ. ಇದು ಕೊಡಗಿನ ಸಮಸ್ತ ಜನಾಂಗಕ್ಕೂ ಸಹಿಸಲಾಗದ ಸಂಗತಿಯಾಗಿದೆ ಎಂದಿದ್ದಾರೆ.

ದಿನನಿತ್ಯವು ಕುಂಡಿಕೆಗೆ ಮಳೆ, ಮಂಜು ಮತ್ತು ಸೂರ್ಯ ಕಿರಣಗಳು ಸದಾ ಬೀಳುತ್ತಿರಬೇಕು. ಆದರೆ, ಅಲ್ಲಿ ಯಾರದೋ ಅನುಕೂಲಕ್ಕಾಗಿ ಕುಂಡಿಕೆಗೆ ಮೇಲ್ಛಾವಣಿ ಹೊದಿಸಿ ಬಿಸಿಲು ಮಳೆ ಬೀಳದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುತ್ತಾರೆ. 2014ನೇ ಡಿಸೆಂಬರ್ 17 ರಂದು ಇಟ್ಟಂತಹ ಅಷ್ಟಮಂಗಲ ಪ್ರಶ್ನೆಯಲ್ಲಿ ಖಡಾಖಂಡಿತವಾಗಿ ಅಲ್ಲಿರುವಂತಹ ಮೇಲ್ಛಾವಣಿಯನ್ನು ತೆಗೆಯಬೇಕೆಂಬದಾಗಿ ಸೂಚಿಸಿರುತ್ತಾರೆ. ಅಂದಿನ ಆಡಳಿತ ವರ್ಗವು ಇದಕ್ಕೆ ಸಮ್ಮತಿಸಿದ್ದರೂ ಮೇಲ್ಛಾವಣಿಯನ್ನು ಇದುವರೆಗೂ ತೆಗೆಸಿರುವದಿಲ್ಲ. ಮಾತೆ ಕಾವೇರಿಯ ಅಪವಿತ್ರತೆಗೆ ಇದೊಂದು ಮೂಲ ಕಾರಣವಾಗಿರುತ್ತದೆ. ಆದುದರಿಂದ ಮೇಲ್ಛಾವಣಿಯನ್ನು ಆದಷ್ಟು ಬೇಗ ತೆಗೆಸಬೇಕಾಗಿ ಹಾಗೂ ಪ್ರವಾಸಿಗರು ಬ್ರಹ್ಮಗಿರಿ ಬೆಟ್ಟದ ಮೇಲೆ ಹೋಗುವದನ್ನು ನಿಷೇಧಿಸ ಬೇಕಾಗಿರುತ್ತದೆ.

ವರುಣನ ಕೃಪೆಗಾಗಿ ತಲಕಾವೇರಿ ಯಲ್ಲಿ ತಾ. 13 ರಂದು ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಾಧು ಸಂತರ ಪರ್ಜನ ವ್ರತ, ಹೋಮ ಹವನಾದಿಗಳನ್ನು ಆಯೋಜಿಸಿ ಪ್ರಾರ್ಥನೆ ಸಲ್ಲಿಸಲು ತೀರ್ಮಾನಿಸಿರುತ್ತಾರೆ. ಇಂತಹ ಜಪ, ಹೋಮ ಹವನಾದಿಗಳು ಕಾವೇರಿ ಮಾತೆಗೆ ಇಷ್ಟವಿರುವದಿಲ್ಲ. ಅಲ್ಲದೆ ಇಂತಹ ಜಪ-ತಪಗಳಿಂದ ಯಾವದೇ ಪ್ರಯೋಜನವು ಬರುವದಿಲ್ಲ. ಇದು ಜನರ ಕಣ್ಣುಕಟ್ಟುವದಕ್ಕೋಸ್ಕರ ಮಾಡಿರುವದಾಗಿರುತ್ತದೆ. ಅಲ್ಲದೆ ಅಂತಹ ಸಾಧು ಸಂತರ ಪ್ರಚಾರಕ್ಕಾಗಿ ಆಗಿರುತ್ತದೆ. ಕಾವೇರಿ ಉಗಮ ಸ್ಥಾನದಲ್ಲಿ ಆಗುವ ಅಕ್ರಮ-ಅನ್ಯಾಯಗಳನ್ನು ಮತ್ತು ಅಡೆ-ತಡೆಗಳನ್ನು ತಡೆಗಟ್ಟಿ ಅದಕ್ಕೆ ಸಂಬಂಧಪಟ್ಟವರು ಸಾಮೂಹಿಕ ಪ್ರಾರ್ಥನೆ ಮಾಡಿದರೆ ಮಳೆ ಬರುವ ಸಂಭವ ಇರುತ್ತದೆ.

ಈ ಕಾರಣಗಳಿಂದ ಕಾವೇರಿ ಉಗಮಸ್ಥಾನ ತಲಕಾವೇರಿಯ ತೀರ್ಥ ಕುಂಡಿಕೆಯ ಮೇಲೆ ಹಾಕಿರುವ ಮೇಲ್ಛಾವಣಿಯನ್ನು ತೆಗೆಸಬೇಕಾಗಿಯೂ ಹಾಗೂ ಬ್ರಹ್ಮಗಿರಿಯು ಪವಿತ್ರ ಸ್ಥಾನವಾಗಿದ್ದು ಅಲ್ಲಿಗೆ ಪ್ರವಾಸಿಗರು ಹೋಗುವದನ್ನು ತಡೆಯಬೇಕಾಗಿ ಕೊಡವ ಮಕ್ಕಡ ಕೂಟ ಆಗ್ರಹಿಸಿದೆ. ತಪ್ಪಿದಲ್ಲಿ ಕೊಡಗಿನ ಸಮಸ್ತ ಜನರ ಸಹಕಾರದೊಂದಿಗೆ ತಾವೇ ತೆರವುಗೊಳಿಸಬೇಕಾಗುವಂತಹ ಪ್ರಸಂಗ ಒದಗಿ ಬರಲು ಅವಕಾಶ ನೀಡಬಾರ ದೆಂದು ಐಯ್ಯಪ್ಪ ಎಚ್ಚರಿಸಿದ್ದಾರೆ.