ಸೋಮವಾರಪೇಟೆ, ಏ. 30: ಒಂದೊಮ್ಮೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆ ಪಡೆಯಲು ಹೋರಾಟ, ಪ್ರತಿಭಟನೆ, ನೂಕುನುಗ್ಗಲು ನಡೆಸುತ್ತಿದ್ದ ಗ್ರಾಹಕರು ಇದೀಗ ನಿರಾಸಕ್ತಿ ವಹಿಸುತ್ತಿರುವದು ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ವೇದ್ಯವಾಯಿತು.

ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿ ಜನ ಸಂಚಾರವೇ ಕಡಿಮೆ, ಸೋಮವಾರ ಹೊರತುಪಡಿಸಿದರೆ ಉಳಿದ ದಿನ ನಗರ ಖಾಲಿ ಖಾಲಿಯಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಲಕ್ಷಾಂತರ ರೂಪಾಯಿ ಠೇವಣಿಯಿಟ್ಟು, ಸಾವಿರಾರು ರೂಪಾಯಿ ಬಾಡಿಗೆ ನೀಡಲು ಅಷ್ಟೊಂದು ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಯುವದೇ? ಎಂಬ ಅನುಮಾನದಲ್ಲಿ ವ್ಯಾಪಾರಸ್ಥರು ಇದ್ದಂತೆ ಕಂಡುಬಂತು.

ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯ ಕಾಂಪ್ಲೆಕ್ಸ್ ಸೇರಿದಂತೆ ವಿವಿಧ 26 ಮಳಿಗೆಗಳ ಹರಾಜು ಪ್ರಕ್ರಿಯೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸಂದರ್ಭ, 26 ಮಳಿಗೆಗಳ ಹರಾಜಿಗಾಗಿ ಕೇವಲ 14 ಮಂದಿ ಮಾತ್ರ ಭಾಗವಹಿಸಿದ್ದರು. ಆದರೂ ಸಹ ಒಂದೆರಡು ಮಂದಿಯನ್ನು ಹೊರತು ಪಡಿಸಿದರೆ ಬೇರಾರು ಅಂಗಡಿ ಮಳಿಗೆ ಪಡೆಯುವ ಉತ್ಸಾಹ ತೋರಲಿಲ್ಲ.

ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ಅಂಗಡಿ ಮಳಿಗೆಗೆ ಕೇವಲ ಒಬ್ಬರೇ ಬಿಡ್ಡ್‍ದಾರರು ಭಾಗವಹಿಸಿ 2,75,000 ಮುಂಗಡ, ಬಾಡಿಗೆ, ಸರ್ಕಾರಿ ಸವಾಲ್ 3000 ಇದ್ದದನ್ನು 100 ರೂ. ಗೆ ಹೆಚ್ಚಿಸುವ ಮೂಲಕ 3100ಕ್ಕೆ ನಿಲ್ಲಿಸಿದರು. ಬಾಡಿಗೆಯನ್ನು ಸ್ವಲ್ಪ ಹೆಚ್ಚಿಸುವಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಮನವಿ ಮಾಡಿದರೂ ಬಿಡ್ಡ್‍ದಾರರು ಯಾವದೇ ಆಸಕ್ತಿ ತೋರಲಿಲ್ಲ. ಇಲ್ಲಿನ ಕೊಠಡಿ ಸಂಖ್ಯೆ 7 ಕ್ಕೆ 2,75,000 ಮುಂಗಡ, ಬಾಡಿಗೆ, ಸರ್ಕಾರಿ ಸವಾಲ್ 3000 ಇದ್ದದನ್ನು ಒಬ್ಬರು 50ರೂ. ಮತ್ತೊಬ್ಬರು 25 ರೂ. ಹೆಚ್ಚಿಸುವ ಮೂಲಕ 3075ಕ್ಕೆ ನಿಲ್ಲಿಸಿದರು.

ನಂತರ ಹಸಿ ಮೀನು ಮಾರುಕಟ್ಟೆ ಹಿಂಭಾಗದ ಮಳಿಗೆ ಒಂದಕ್ಕೆ 1 ಲಕ್ಷ ರೂ ಮುಂಗಡ 1600 ರೂ. ಗೆ ಹರಾಜಾಗಿದ್ದು ಬಿಟ್ಟರೇ 23 ಮಳಿಗೆಗಳ ಹರಾಜಿಗೆ ನಾಗರಿಕರು ಆಸಕ್ತಿ ತೋರದಿದ್ದರಿಂದ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಸಹಾಯಕರಾಗಿ ಹರಾಜನ್ನು ಮುಂದೂಡಿದರು.

ಈ ಹಿಂದೆ ನಡೆದಿದ್ದ ಹರಾಜು ಪ್ರಕ್ರಿಯೆ ಅಕ್ಷರಶಃ ಕದನ ಕಣವಾಗಿ ಮಾರ್ಪಾಟಾಗುತ್ತಿತ್ತು. ಕೆಲವೊಮ್ಮೆ ಪೊಲೀಸರ ಬಂದೋಬಸ್ತ್‍ನಲ್ಲಿಯೇ ಹರಾಜು ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಇಂದಿನ ಪ್ರಕ್ರಿಯೆ ಅದಕ್ಕೆ ವಿರುದ್ಧವಾಗಿ ನಡೆಯಿತು. ಪಂಚಾಯಿತಿ ಅಡಳಿತ ಮಂಡಳಿಗೆ ಸ್ವತಃ ಶಾಕ್ ನೀಡಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯರಾದ ಲೀಲಾ ನಿರ್ವಾಣಿ, ಬಿ.ಎಂ. ಸುರೇಶ್, ನಾಮ ನಿರ್ದೇಶಿತ ಸದಸ್ಯರಾದ ಇಂದ್ರೇಶ್ ಹಾಗೂ ನಾಗರಾಜ್, ಮುಖ್ಯಾಧಿಕಾರಿ ಕೃಷ್ಣೇಗೌಡ ಹಾಗೂ ಪಂಚಾಯಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.