ಮಡಿಕೇರಿ, ಮೇ 4 : ಮೂರ್ನಾಡಿನ ಭಗವತಿ ಕಾಲೋನಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳಿಗಾಗಿ ಸ್ಮಶಾನಕ್ಕೆಂದು ಮೀಸಲಿಟ್ಟಿರುವ ಜಾಗವನ್ನು ಮೇಲ್ವರ್ಗದ ಕೆಲವು ಮಂದಿ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಎಂ.ಬಾಡಗ ಗ್ರಾಮದ ಭಗವತಿ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿ.ಮಣಿ ಎಂ.ಬಾಡಗ ಗ್ರಾಮದ ಭಗವತಿ ಕಾಲೋನಿಯಲ್ಲಿ ಸುಮಾರು 20 ಸೆಂಟು ಜಾಗವನ್ನು ಸ್ಮಶಾನಕ್ಕಾಗಿ 150 ವರ್ಷಗಳಿಂದ ಬೇಲಿ ನಿರ್ಮಿಸಿ ಸಂರಕ್ಷಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮೇಲ್ವರ್ಗದ ಮಂದಿ ಜಾಗಕ್ಕೆ ಸಂಬಂಧಿಸಿದಂತೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟ ಪಂಗಡದ ಕುಟುಂಬಗಳಿಗಾಗಿಯೇ ಮೀಸಲಿರುವ ಈ ಜಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಶವ ಸಂಸ್ಕಾರವನ್ನು ನಡೆಸುತ್ತಾ ಬರಲಾಗಿದೆ. ಇದೀಗ ಕೆಲವರು ಈ ಜಾಗದ ಅರ್ಧಭಾಗ ತಮಗೆ ಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

20 ಸೆಂಟು ಜಾಗವನ್ನು ಸಕ್ರಮ ಗೊಳಿಸುವಂತೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಈಗಾಗಲೇ ಅನೇಕ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳಿಂದಲೂ ಉತ್ತಮ ಸ್ಪಂದನೆ ದೊರತ್ತಿದೆ. ಈ ನಡುವೆಯೇ ಮೇಲ್ವರ್ಗದ ಕೆಲವು ಮಂದಿ ತಮಗೆ ಕಿರುಕುಳ ನೀಡುತ್ತಿರುವದು ಬೇಸರದ ವಿಚಾರವಾಗಿದ್ದು, ಅಧಿಕಾರಿಗಳು ಆದಷ್ಟು ಬೇಗ 20 ಸೆಂಟು ಜಾಗವನ್ನು ಪರಿಶಿಷ್ಟ ಪಂಗಡದ ಸ್ಮಶಾನಕ್ಕೆಂದು ಮೀಸಲಿಟ್ಟು ಅಧಿಕೃತಗೊಳಿಸುವಂತೆ ಮಣಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೋನಿ ನಿವಾಸಿಗಳಾದ ಎಚ್.ಪಿ ವಸಂತ, ಎಚ್. ಕೆ.ಮೋಟಯ್ಯ, ಎಚ್. ಎನ್.ಲಿಂಗಪ್ಪ, ಎಚ್.ವಿ.ಜಯಂತಿ ಹಾಗೂ ಹೆಚ್.ಎಂ.ರತಿ ಉಪಸ್ಥಿತರಿದ್ದರು.